ಕಳಂಕ್ ಶೂಟಿಂಗ್‌ನಲ್ಲಿ ವರುಣ್ ಕೈಗೆ ಪೆಟ್ಟು

Update: 2018-06-09 12:02 GMT

ಬಾಲಿವುಡ್‌ನಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆ ಮೆಟ್ಟ್ಟಿಲೇರುತ್ತಿರುವ ಯುವನಟ ವರುಣ್ ಧವನ್ , ಇತ್ತೀಚೆಗೆ ಕಳಂಕ್‌ನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ದುರದೃಷ್ಟವಶಾತ್ ಕೈಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಫೈಟಿಂಗ್ ಸನ್ನಿವೇಶದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ವರುಣ್, ತನ್ನ ಸಹನಟನೆಡೆಗೆ ಬಾಗಿಲನ್ನು ಎತ್ತಿ , ಎಸೆಯಬೇಕಾಗಿತ್ತು. ಆದರೆ ಅವರು ಎತ್ತಿದ ರಭಸಕ್ಕೆ ಕೈಯ ಮೂಳೆ ತೀವ್ರ ಜಖಂಗೊಂಡಿತ್ತು. ಕೂಡಲೇ ಚಿತ್ರ ತಂಡ ಧಾವಿಸಿ, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಿತು. ಆದಾಗ್ಯೂ, ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿಟ್ಟುಕೊಂಡಿರುವ ವರುಣ್, ಅಂದು ಸಂಜೆಯೇ ಚಿತ್ರೀಕರಣಕ್ಕೆ ಆಗಮಿಸಿ ವಿಶೇಷ ಡಾನ್ಸ್ ಟ್ರಾಕ್‌ನ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಮುಂಗಾರು ಶುರುವಾಗುವ ಮೊದಲೇ ನಿರ್ದೇಶಕ ಅಭಿಷೇಕ್ ವರ್ಮನ್ ಅವರು ಚಿತ್ರೀಕರಣವನ್ನು ಮುಗಿಸುವ ಯೋಚನೆ ಹೊಂದಿದ್ದಾರೆ.

ಕಳಂಕ್ ಸ್ವಾತಂತ್ರ ಪೂರ್ವದ ಕಥಾವಸ್ತುವನ್ನು ಹೊಂದಿದ್ದು, ಮಲ್ಟಿಸ್ಟಾರ್ ಚಿತ್ರವಾಗಿದೆ. ಸಂಜಯ್‌ದತ್, ಆದಿತ್ಯಾ ರಾಯ್ ಕಪೂರ್, ಆಲಿಯಾ ಭಟ್, ಮಾಧುರಿ ದೀಕ್ಷಿತ್ ಹಾಗೂ ಸೋನಾಕ್ಷಿ ಸಿನ್ಹಾರಂತಹ ಖ್ಯಾತ ನಟ,ನಟಿಯರ ದಂಡೇ ಇಲ್ಲಿದೆ.

ಕರಣ್‌ಜೋಹರ್, ಸಾಜಿದ್ ನಡಿಯಾದ್‌ವಾಲಾ, ಹೀರೂ ಯಶ್‌ಜೋಹರ್ ಹಾಗೂ ಅಪೂರ್ವ ಮೆಹ್ತಾ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಹಾಲಿವುಡ್‌ನ ಫಾಕ್ಸ್ ಸ್ಟುಡಿಯೋಸ್ ಸಹನಿರ್ಮಾಪಕ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಕಳಂಕ್ ಮುಂದಿನ ವರ್ಷದ ಎಪ್ರಿಲ್ 19ರಂದು ಚಿತ್ರ ಮಂದಿರಗಳಿಗೆ ಅಪ್ಪಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News