ಮ.ಪ್ರದೇಶ ಸಿಎಂ ವಿರುದ್ಧ ಟೀಕೆಗೆ ಕಾಂಗ್ರೆಸ್ ಆಯುಧವಾದ ‘ಅಮಿತಾಬ್ ಬಚ್ಚನ್’!

Update: 2018-06-09 15:35 GMT

ಭೋಪಾಲ್, ಜೂ.9: ‘‘ಕಡಿಮೆ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದರೂ ಬದುಕಿನಲ್ಲಿ ಅಸಾಧಾರಣ ಯಶಸ್ಸನ್ನು ಕಂಡ ಮಹನೀಯರಲ್ಲಿ ಅಮಿತಾಭ್ ಬಚ್ಚನ್ ಕೂಡಾ ಒಬ್ಬರಾಗಿದ್ದಾರೆ’’...!. ಹೀಗೆಂದು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿದವರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್. ಭೋಪಾಲ್‌ನಲ್ಲಿ ಶಾಲಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾರ್ಗದರ್ಶನ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಈ ಎಡವಟ್ಟು ಮಾಡಿಕೊಂಡಿದ್ದಾರೆ.

ವಾಸ್ತವವಾಗಿ ಅಮಿತಾಭ್ ಬಚ್ಚನ್ ಅವರು ಪದವಿ ಶಿಕ್ಷಣ ಪಡೆದವರಾಗಿದ್ದು, ಶೇರ್‌ವುಡ್ ಕಾಲೇಜ್ ಹಾಗೂ ಕಿರೊರಿಮಾಲ್ ಕಾಲೇಜ್‌ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದವರಾಗಿದ್ದಾರೆ.

ಶಿವರಾಜ್‌ಸಿಂಗ್ ಚೌಹಾಣ್‌ರಿಂದಾದ ಈ ಪ್ರಮಾದವು, ಮಧ್ಯಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ಟೀಕಾಸ್ತ್ರ ದೊರೆತಂತಾಗಿದೆ. ‘‘ಅಮಿತಾಭ್ ಪತ್ನಿ ಜಯಾಬಚ್ಚನ್ ಮೂಲತಃ ಮಧ್ಯಪ್ರದೇಶದ ಭೋಪಾಲಂ ನಗರದವರಾಗಿದ್ದು, ಈ ಹಿರಿಯ ನಟನ ಅತ್ತೆ ಮನೆಗೆ, ಶಿವರಾಜ್‌ಸಿಂಗ್ ಚೌಹಾಣ್ ಅವಮಾನ ಮಾಡಿದ್ದಾರೆ’’ ಎಂದು ಅದು ಬಣ್ಣಿಸಿದೆ.

  ಚೌಹಾಣ್ ಅವರು ತನ್ನ ಭಾಷಣದಲ್ಲಿ ಹನ್ನೆರಡನೆ ತರಗತಿ ಪರೀಕ್ಷೆಯಲ್ಲಿ ಶೇ.70ಕ್ಕಿಂತಲೂ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಯತ್ನಿಸುತ್ತಿದ್ದರು. ತಾನು ಕುಳಿತ ಕೊಂಬೆಯನ್ನೇ ಕತ್ತರಿಸುವಷ್ಟು ಮೂರ್ಖನಾಗಿದ್ದ ಕಾಳಿದಾಸ ಆನಂತರ ಹೇಗೆ ಮಹಾನ್ ಸಂಸ್ಕೃತ ಕವಿಯಾದನೆಂದು ವಿದ್ಯಾರ್ಥಿಗಳಿಗೆ ವಿವರಿಸಿದ ಮುಖ್ಯಮಂತ್ರಿಯವರು, ಔಪಚಾರಿಕ ಶಿಕ್ಷಣವನ್ನು ಪಡೆಯದ ನೊಬೆಲ್ ಪುರಸ್ಕೃತ ಸಾಹಿತಿ ರವೀಂದ್ರನಾಥ್ ಠಾಗೋರ್ ಹಾಗೂ ಪರೀಕ್ಷೆಯಲ್ಲಿ ಕಳಪೆ ನಿರ್ವಹಣೆ ಪ್ರದರ್ಶಿಸುತ್ತಿದ್ದ ಮಹಾನ್ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಸಾಧನೆಯನ್ನು ಕೂಡಾ ತನ್ನ ಭಾಷಣದಲ್ಲಿ ಉಲ್ಲೇಖಿಸಿದ್ದರು. ಆದರೆ ಇದೇ ವೇಳೆ ಶಿವರಾಜ್ ಸಿಂಗ್ ಚೌಹಾಣ್, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಶ್ ಹಾಗೂ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡಾ ಕಡಿಮೆ  ಶೈಕ್ಷಣಿಕ ಅರ್ಹತೆಯುಳ್ಳವರೆಂದು ಹೇಳುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ. ‘‘ನೀವು ಬಾಲಿವುಡ್‌ನ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಬಗ್ಗೆ ಕೇಳಿರಬಹುದು. ಅವರಿಗೆ ಯಾವುದೇ ಉನ್ನತ ಶಿಕ್ಷಣದ ಪದವಿಗಳಿರಲಿಲ್ಲ. ಒಂದೊಮ್ಮೆ ಧ್ವನಿ ಚೆನ್ನಾಗಿಲ್ಲವೆಂಬ ಕಾರಣಕ್ಕಾಗಿ ಆಕಾಶವಾಣಿ ಅವರಿಗೆ ಉದ್ಯೋಗ ನೀಡಲು ನಿರಾಕರಿಸಿತ್ತು. ಆದರೆ ಇಂದು ಅವರು ತನ್ನ ಕಂಠದಿಂದಲೇ ಖ್ಯಾತರಾಗಿದ್ದಾರೆ’’ ಎಂದು ಮುಖ್ಯಮಂತ್ರಿಯವರು, ವಿದ್ಯಾರ್ಥಿಗಳ ಮಾರ್ಗದರ್ಶನ ಶಿಬಿರದಲ್ಲಿ ಹೇಳಿದರು.

ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದುದಕ್ಕೆ ಕುಗ್ಗದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ನಿಮ್ಮ ಚೈತನ್ಯವನ್ನು ಮೇಲ್ಮಟ್ಟದಲ್ಲೇ ಇರಿಸಿಕೊಂಡು, ಈ ಮಹನೀಯರನ್ನು ಸ್ಫೂರ್ತಿಯಾಗಿರಿಸಿಕೊಂಡಲ್ಲಿ, ನಿಮಗೆ ಒಳ್ಳೆ.ಯ ಅಂಕ ಪಡೆಯಬೇಕಾದ ಅವಶ್ಯಕತೆ ಇರುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News