×
Ad

ವಿವಿ ಪ್ಯಾಟ್ ಯಂತ್ರದ ದೋಷಕ್ಕೆ ಅತಿ ಬೆಳಕು ಕಾರಣ: ಚು.ಆಯೋಗ ಸ್ಪಷ್ಟನೆ

Update: 2018-06-09 21:21 IST

ಹೊಸದಿಲ್ಲಿ, ಜೂ.9: ಕೈರಾನಾ ಹಾಗೂ ಭಂಡಾರ- ಗೊಂಡಿಯಾ ಲೋಕಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಮತಯಂತ್ರಕ್ಕೆ ಜೋಡಿಸಲ್ಪಟ್ಟಿದ್ದ ವಿವಿ ಪ್ಯಾಟ್ ಯಂತ್ರಗಳು ಕಾರ್ಯನಿರ್ವಹಿಸದಿರಲು ಅವುಗಳನ್ನು ಮತಗಟ್ಟೆಗಳಲ್ಲಿ ಅತಿಯಾಗಿ ಬೆಳಕಿಗೆ ಒಡ್ಡಿದ್ದೇ ಕಾರಣವೆಂದು ಚುನಾವಣಾ ಆಯೋಗವು ಶನಿವಾರ ಸ್ಪಷ್ಟಪಡಿಸಿದೆ.

ಈ ನಿಟ್ಟಿನಲ್ಲಿ ವಿವಿಪ್ಯಾಟ್‌ಗಳ ವಿನ್ಯಾಸದಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡುವ ಬಗ್ಗೆ ಸಲಹೆಗಳನ್ನು ನೀಡುವಂತೆ ಚುನಾವಣಾ ಆಯೋಗವು ಉತ್ಪಾದಕರು ಹಾಗೂ ತಾಂತ್ರಿಕ ತಜ್ಞರ ಸಮಿತಿ(ಟಿಇಸಿ)ಯನ್ನು ಕೇಳಿಕೊಂಡಿದೆ. ಅತಿಯಾದ ಬೆಳಕಿನ ಕಾರಣದಿಂದಾಗಿ ವಿವಿಪ್ಯಾಟ್‌ಗಳು ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳುವುದನ್ನು ತಡೆಯಲು ವಿವಿಪ್ಯಾಟ್‌ನ ಹಾರ್ಡ್‌ವೇರ್‌ನಲ್ಲಿ ಸುಧಾರಣೆಗಳನ್ನು ಮಾಡಬೇಕೆಂಬ ಟಿಇಸಿಯ ಸಲಹೆಯನ್ನು ಕೂಡಾ ಅದು ಸ್ವೀಕರಿಸಿದೆ.

 ವಿವಿಪ್ಯಾಟ್ ಯಂತ್ರಗಳ ವೈಫಲ್ಯಗಳಿಗೆ ಕಾರಣವನ್ನು ಕಂಡುಹಿಡಿಯಲು ಚುನಾವಣಾ ಆಯೋಗವು ಎರಡು ವಿಶೇಷ ತಂಡಗಳನ್ನು ನಿಯೋಜಿಸಿತ್ತು. ಈ ಎರಡು ತಂಡಗಳು ಸಲ್ಲಿಸಿದ ಪ್ರಾಥಮಿಕ ಹಂತದ ಸತ್ಯಶೋಧನಾ ವರದಿಗಳು, ವಿವಿ ಪ್ಯಾಟ್‌ಗಳಲ್ಲಾದ ಲೋಪಕ್ಕೆ ಕಂಟ್ರಾಸ್ಟ್ ಸೆನ್ಸರ್ ಹಾಗೂ ಲೆಂತ್ ಕಂಟ್ರಾಸ್ಟ್ ಎರಡು ಕಾರಣಗಳನ್ನು ಪಟ್ಟಿ ಮಾಡಿತ್ತು.

 ಭವಿಷ್ಯದಲ್ಲಿ ಮತಯತ್ರಗಳು ಅತಿಯಾದ ಬೆಳಕಿಗೆ ಒಡ್ಡಲ್ಪಡುವುದನ್ನು ತಡೆಯಲು ಮತಗಟ್ಟೆಗಳ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡುವಂತೆಯೂ ಅಧಿಕಾರಿಯವರು ತಿಳಿಸಿದ್ದಾರೆ.

ಒಮ್ಮೆ ವಿವಿಪ್ಯಾಟ್‌ಗಳು ನ್ಯಾಯಾಲಯದಲ್ಲಿರುವ ಚುನಾವಣಾ ತಕರಾರು ಅರ್ಜಿಗಳಿಂದ ಮುಕ್ತವಾದಲ್ಲಿ, ಅವುಗಳ ಬಗ್ಗೆ ವಿಸ್ತೃತವಾದ ತಾಂತ್ರಿಕ ವಿಶ್ಲೇಷಣೆಯನ್ನು ನಡೆಸುವಂತೆ ತಯಾರಕರನ್ನು ಕೋರಲಾಗುವುದು ಎಂದು ಚುನಾವಣಾ ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News