"2019ರವರೆಗೆ ಪತ್ರಿಕೋದ್ಯಮ ನಡೆಸದಂತೆ ನನಗೆ ಒತ್ತಡ ಹೇರಲಾಗಿದೆ''
ಹೊಸದಿಲ್ಲಿ, ಜೂ.9: "ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳದಂತೆ ನನಗೆ ಆಡಳಿತದಲ್ಲಿರುವ ಪ್ರಭಾವಿ ವ್ಯಕ್ತಿಗಳಿಂದ ಪರೋಕ್ಷ ಬೆದರಿಕೆಗಳು ಹಾಗೂ ಸಂದೇಶಗಳು ಬರುತ್ತಿವೆ. ನಾನು ಮತ್ತು ನನ್ನ ಕುಟುಂಬ ಸಂಪೂರ್ಣ ನಿಗಾದಲ್ಲಿದೆಯೆಂದು ಸುಳಿವು ನೀಡಲಾಗಿದೆ" ಎಂದು ಖ್ಯಾತ ಪತ್ರಕರ್ತೆ ಬರ್ಖಾ ದತ್ ತಮ್ಮ ಸರಣಿ ಟ್ವೀಟ್ ಗಳ ಮೂಲಕ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಇಂದು ಸಂದರ್ಶನವೊಂದರಲ್ಲಿ ಮಾತನಾಡಿದ ದತ್, "ನನಗೆ ಬಿಜೆಪಿ ಸದಸ್ಯರೊಬ್ಬರು ಕರೆ ಮಾಡಿ 2019ರ ತನಕ ಪತ್ರಿಕೋದ್ಯಮ ನಡೆಸಬಾರದೆಂದು ಹಾಗೂ ಬೇರೇನಾದರೂ ಮಾಡುವಂತೆ ಸಲಹೆ ನೀಡಿದ್ದರು" ಎಂದು ಆನ್ ಲೈನ್ ವೀಡಿಯೋ ನ್ಯೂಸ್ ನೆಟ್ ವರ್ಕ್ 'ನ್ಯೂಸ್ ಕ್ಲಿಕ್'ಗಾಗಿ ಪರಂಜೋಯ್ ಗುಹಾ ಥಾಕುರ್ತ ಅವರಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಳೆದ ಒಂದೂವರೆ ವರ್ಷಗಳಲ್ಲಿ ತನ್ನನ್ನು ಹಲವು ಟಿವಿ ವಾಹಿನಿಗಳ ಪ್ರವರ್ತಕರು ಸಂಪರ್ಕಿಸಿ ಸಲಹೆಗಾರ್ತಿ ಅಥವಾ ಕಾರ್ಯಕ್ರಮ ನಿರೂಪಕಿ ಹುದ್ದೆ ಆಫರ್ ಮಾಡಿದ್ದರೂ ಪ್ರತಿ ಬಾರಿ ಅವರು ಸರಕಾರದ ಪ್ರತಿಕ್ರಿಯೆಗೆ ಹೆದರಿ ಹಿಂದೆ ಸರಿದಿದ್ದರು ಎಂದು ಬರ್ಖಾ ಹೇಳಿಕೊಂಡಿದ್ದಾರೆ. "ಸರಕಾರದ ಮತ್ತು ಪಕ್ಷದ ಅತಿ ಪ್ರಮುಖ ಇಬ್ಬರು ಮೂವರಿಗೆ ನಾನು ಇಷ್ಟವಿಲ್ಲ'' ಎಂದು ಟಿವಿ ವಾಹಿನಿಗಳ ಪ್ರವರ್ತಕರು ತನಗೆ ಹೇಳಿದ್ದರು ಎಂದೂ ಬರ್ಖಾ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
"ನಾನು ಹೊಸ ಟಿವಿ ವಾಹಿನಿ ಆರಂಭಿಸುವ ಬಗ್ಗೆ ವೆಬ್ ತಾಣವೊಂದು ವರದಿ ಮಾಡಿದ ನಂತರ ಬಿಜೆಪಿ ಜತೆ ಸಂಪರ್ಕವಿರುವ ತನ್ನ ಆತ್ಮೀಯ ಸ್ನೇಹಿತರೊಬ್ಬರು ನನ್ನನ್ನು ಭೇಟಿಯಾಗಿದ್ದರು. ಸರಕಾರದ ಮೇಲೆ ಪ್ರಭಾವ ಬೀರುವ ಪಕ್ಷದ ಒಂದು ವಿಭಾಗವು ಸಭೆ ನಡೆಸಿ 'ಆಕೆ ಟಿವಿಯಲ್ಲಿ ಕಾಣಿಸಿಕೊಳ್ಳುವುದನ್ನು ತಡೆಯಲು ಏನು ಮಾಡುವುದು' ಎಂದು ಚರ್ಚಿಸಿತ್ತೆಂದು ಅವರು ನನಗೆ ತಿಳಿಸಿದ್ದರು. ನಾನು ಯಾರೊಂದಿಗಿದ್ದೇನೆ, ನನ್ನ ಬ್ಯಾಂಕ್ ಖಾತೆಯ ಮಾಹಿತಿ ಹೇಗೆ ಪಡೆಯುವುದು ಹಾಗೂ ನಾನು ಯಾರ ಜತೆ ಡೇಟಿಂಗ್ ಮಾಡುತ್ತೇನೆ ಎಂಬ ಪ್ರಶ್ನೆಗಳು ಸಭೆಯಲ್ಲಿ ಚರ್ಚಿತವಾಗಿದ್ದವು'' ಎಂದೂ ಬರ್ಖಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ನಾನೇನೂ ಸಂಪೂರ್ಣ ಪಕ್ಷವನ್ನು ದೂರುತ್ತಿಲ್ಲ, ಕೆಲ ಬಿಜೆಪಿ ಸದಸ್ಯರು ಕಳೆದ ಕೆಲ ತಿಂಗಳುಗಳಲ್ಲಿ ನನಗೆ ಸಂದರ್ಶನಗಳನ್ನು ನೀಡಿದ್ದಾರೆ" ಎಂದು ಹೇಳಿದ ಬರ್ಖಾ, "ಸರಕಾರ ಮತ್ತು ಮಾಧ್ಯಮವನ್ನೇ ದೂರಬೇಕಾಗಿದೆ. ಮಾಧ್ಯಮ ರಂಗವು ಸರಕಾರಕ್ಕೆ ಎಷ್ಟೊಂದು ಭಯ ಪಡುತ್ತಿದೆ'' ಎಂಬುದು ಕಳವಳಕಾರಿ ವಿಚಾರ ಎಂದರು.
ತಾವು ಬೆದರಿಕೆಗಳ ಬಗ್ಗೆ ಪೊಲೀಸ್ ದೂರು ಏಕೆ ನೀಡಿಲ್ಲ ಎಂದು ಹಲವು ಟ್ವಿಟ್ಟರಿಗರು ಪ್ರಶ್ನಿಸಿದ್ದನ್ನು ಸಂದರ್ಶನದ ವೇಳೆ ಉಲ್ಲೇಖಿಸಿದ ಬರ್ಖಾ, "ನನಗೇನು ನೇರ ಬೆದರಿಕೆಗಳು ಬರುತ್ತಿಲ್ಲ. ಬದಲಾಗಿ ಕಪಟ ತಂತ್ರಗಾರಿಕೆಯ ಮೂಲಕ ಒತ್ತಡ ಹೇರಲಾಗುತ್ತಿದೆ. ಇಂತಹ ಬೆದರಿಕೆಗಳನ್ನು ಪತ್ತೆ ಹಚ್ಚಲು ಅಸಾಧ್ಯ ಹಾಗೂ ದೂರು ದಾಖಲಿಸುವುದು ಕಷ್ಟಕರ'' ಎಂದೂ ಹೇಳಿದ್ದಾರೆ.