ಪಾಕ್ ಚುನಾವಣೆಯಲ್ಲಿ ಜೆಯುಡಿಯ 200ಕ್ಕೂ ಅಧಿಕ ಅಭ್ಯರ್ಥಿಗಳು

Update: 2018-06-09 16:54 GMT

ಇಸ್ಲಾಮಾಬಾದ್, ಜೂ. 9: ಪಾಕಿಸ್ತಾನದ ಸಂಸದೀಯ ಚುನಾವಣೆಯಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಝ್ ಸಯೀದ್ ಸ್ಪರ್ಧಿಸುವುದಿಲ್ಲ. ಆದರೆ, ಅವನ ಜಮಾಅತುದಅವಾ (ಜೆಯುಡಿ) ಸಂಘಟನೆಯು, ಸಕ್ರಿಯವಾಗಿಲ್ಲದ ರಾಜಕೀಯ ಪಕ್ಷವೊಂದರ ಮೂಲಕ 200ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ.

2008ರಲ್ಲಿ ಮುಂಬೈಯಲ್ಲಿ ದಾಳಿ ನಡೆಸಿದ ಲಷ್ಕರೆ ತಯ್ಯಬ ಭಯೋತ್ಪಾದಕ ಸಂಘಟನೆಯ ಆಶ್ರಯ ಸಂಘಟನೆಯಾಗಿರುವ ಜೆಯುಡಿ ಇತ್ತೀಚೆಗೆ ‘ಮಿಲಿ ಮುಸ್ಲಿಮ್ ಲೀಗ್’ (ಎಂಎಂಎಲ್) ಎಂಬ ತನ್ನದೇ ಆದ ರಾಜಕೀಯ ಪಕ್ಷವನ್ನು ಆರಂಭಿಸಿದೆ. ಆದರೆ, ಅದಕ್ಕೆ ಪಾಕಿಸ್ತಾನದ ಚುನಾವಣಾ ಆಯೋಗ ಇನ್ನೂ ಅಂಗೀಕಾರ ನೀಡಿಲ್ಲ.

ಚುನಾವಣೆ ಸಮೀಪಿಸುತ್ತಿರುವಂತೆಯೇ, ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದಿರುವ, ಆದರೆ ಸಕ್ರಿಯವಾಗಿಲ್ಲದ ರಾಜಕೀಯ ಪಕ್ಷ ‘ಅಲ್ಲಾಹು ಅಕ್ಬರ್ ತೆಹ್ರೀಕ್ (ಎಎಟಿ)ನಿಂದ ಸ್ಪರ್ಧಿಸಲು ಜೆಯುಡಿ ನಿರ್ಧರಿಸಿದೆ.

‘‘ಮುಂಬರುವ ಚುನಾವಣೆಯಲ್ಲಿ ಅಲ್ಲಾಹು ಅಕ್ಬರ್ ತೆಹ್ರೀಕ್ ಪಕ್ಷದಿಂದ ಜಂಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮಿಲಿ ಮುಸ್ಲಿಮ್ ಲೀಗ್ ಅಧ್ಯಕ್ಷ ಸೈಫುಲ್ಲಾ ಖಾಲಿದ್ ಮತ್ತು ಅಲ್ಲಾಹು ಅಕ್ಬರ್ ತೆಹ್ರೀಕ್ ಮುಖ್ಯಸ್ಥ ಇಹ್ಸಾನ್ ಬಾರಿ ನಿರ್ಧರಿಸಿದ್ದಾರೆ. ಸ್ಥಾನ ಹಂಚಿಕೆ ಒಪ್ಪಂದದ ಪ್ರಕಾರ, ಮಿಲಿ ಮುಸ್ಲಿಮ್ ಲೀಗ್ 200ಕ್ಕೂ ಅಧಿಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಅವರು ಅಲ್ಲಾಹು ಅಕ್ಬರ್ ತೆಹ್ರೀಕ್ ಪಕ್ಷದ ಚುನಾವಣಾ ಚಿಹ್ನೆ ಕುರ್ಚಿಯಡಿ ಸ್ಪರ್ಧಿಸಲಿದ್ದಾರೆ’’ ಎಂದು ಮಿಲಿ ಮುಸ್ಲಿಮ್ ಲೀಗ್ ವಕ್ತಾರ ಅಹ್ಮದ್ ನದೀಮ್ ಶನಿವಾರ ಪಿಟಿಐಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News