ಬರೋಬ್ಬರಿ 50 ಲಕ್ಷ ರೂ.ಗಳ ಆಫರ್ ತಿರಸ್ಕರಿಸಿದ್ದ ಫಾರೂಕ್ ಅಹ್ಮದ್ ದಾರ್

Update: 2018-06-10 15:35 GMT

ಶ್ರೀನಗರ,ಜೂ.10: ಸೇನೆಯ ಮೇಜರ್ ಲೀತುಲ್ ಗೊಗೊಯ್ ಅವರಿಂದ ಜೀಪಿನ ಮುಂಭಾಗಕ್ಕೆ ಕಟ್ಟಲ್ಪಟ್ಟು ‘ಮಾನವ ಗುರಾಣಿ’ಯಾಗಿ ಬಳಕೆಯಾಗುವ ಮೂಲಕ ಕಳೆದ ವರ್ಷದ ಎಪ್ರಿಲ್‌ನಲ್ಲಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದ ಕಾಶ್ಮೀರಿ ಯುವಕ ಫಾರೂಕ್ ಅಹ್ಮದ್ ದಾರ್(29) ಅವರಿಗೆ ಬಿಗ್ ಬಾಸ್ ಟಿವಿ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗಿಯಾಗಲು 50 ಲ.ರೂ.ಗಳ ಕೊಡುಗೆಯು ಬಂದಿತ್ತಾದರೂ ಅವರು ಅದನ್ನು ನಿರಾಕರಿಸಿದ್ದರು.

‘‘ಕಳೆದ ವರ್ಷದ ಜೂನ್‌ನಲ್ಲಿ ಬಿಗ್ ಬಾಸ್‌ನ ನಿರ್ಮಾಪಕರು ಅವರ ಶೋದಲ್ಲಿ ಭಾಗಿಯಾಗಲು 50 ಲ.ರೂ.ಗಳ ಕೊಡುಗೆಯನ್ನು ನನ್ನ ಮುಂದಿಟ್ಟಿದ್ದರು. ನನಗಾಗಿ ವಿಮಾನ ಟಿಕೆಟ್‌ಗಳು ಕೂಡ ಸಿದ್ಧವಾಗಿವೆ ಎಂದೂ ಅವರು ಹೇಳಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೆ’’ ಎಂದು ದಾರ್ ಹೇಳಿರುವುದನ್ನು ಆಂಗ್ಲ ದೈನಿಕವೊಂದು ಉಲ್ಲೇಖಿಸಿದೆ.

 ಇದಕ್ಕೆ ಪ್ರತಿಕ್ರಿಯಿಸಿರುವ ಕಲರ್ಸ್ ಟಿವಿ ಚಾನೆಲ್,ಇದೊಂದು ಊಹಾಪೋಹ ಎಂದು ಹೇಳಿದೆ. ಇಂತಹ ಕೊಡುಗೆಯೊಂದನ್ನು ದಾರ್ ಮುಂದೆ ತಾನು ಇಟ್ಟಿದ್ದನ್ನು ಅದು ದೃಢಪಡಿಸಲಿಲ್ಲ,ನಿರಾಕರಣೆಯನ್ನೂ ಮಾಡಲಿಲ್ಲ. ದಾರ್ ಅವರನ್ನು ಸೇನಾ ಜೀಪಿಗೆ ಕಟ್ಟಿದ್ದ ಚಿತ್ರಗಳು ವೈರಲ್ ಆದ ಮೂರು ತಿಂಗಳುಗಳ ಬಳಿಕ ಚಾನೆಲ್ ಈ ಕೊಡುಗೆಯನ್ನು ಅವರ ಮುಂದೆ ಇರಿಸಿತ್ತೆನ್ನಲಾಗಿದೆ.

ಬಿಗ್‌ಬಾಸ್‌ನ ಅಪರಿಚಿತ ನಿರ್ಮಾಪಕರೋರ್ವರು ದೂರವಾಣಿ ಮೂಲಕ ದಾರ್ ಅವರನ್ನು ಸಂಪರ್ಕಿಸಿದ್ದರು. ಆದರೆ ದಾರ್ ಸೆಲೆಬ್ರಿಟಿಯಲ್ಲ,ಅವರು ಬಲಿಪಶುವಾಗಿದ್ದಾರೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದೆದುರು ದಾರ್ ಪರ ಅರ್ಜಿ ಸಲ್ಲಿಸಿರುವ ಅಂತರರಾಷ್ಟ್ರೀಯ ನ್ಯಾಯ ವೇದಿಕೆಯ ಮುಖ್ಯಸ್ಥ ಮುಹಮ್ಮದ್ ಎಹ್ಸಾನ್ ಉಂತೂ ಅವರು ತಿಳಿಸಿದರು.

ದಾರ್ ಅವರು ಅನುಭವಿಸಿದ್ದ ಅವಮಾನ,ದೈಹಿಕ ಮತ್ತು ಮಾನಸಿಕ ಹಿಂಸೆ,ಒತ್ತಡ ಮತ್ತು ಅಕ್ರಮ ದಿಗ್ಬಂಧನಕ್ಕಾಗಿ ಅವರಿಗೆ 10 ಲ.ರೂ.ಗಳ ಪರಿಹಾರವನ್ನು ಪಾವತಿಸುವಂತೆ ಆಯೋಗವು ಮಾಡಿದ್ದ ಶಿಫಾರಸನ್ನು ಜಮ್ಮು-ಕಾಶ್ಮೀರ ಸರಕಾರವು ತಿರಸ್ಕರಿಸಿದೆ.

ದಾರ್‌ಗೆ ಪರಿಹಾರ ನೀಡಿಕೆಯನ್ನು ವಿರೋಧಿಸಿರುವ ಕೇಂದ್ರ ಸರಕಾರವು,ಕಲ್ಲು ತೂರಾಟಗಾರರಿಗೆ ಯಾವುದೇ ಸಹಾನುಭೂತಿ ಸಲ್ಲದು ಎಂದು ಹೇಳಿದೆ.

ಕಳೆದ ವರ್ಷ ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭ ಮೇ.ಗೊಗೊಯ್ ಅವರು ಕಲ್ಲು ತೂರಾಟಗಾರರ ವಿರುದ್ಧ ಮಾನವ ಗುರಾಣಿಯಾಗಿ ಕಸೂತಿ ಕೆಲಸಗಾರ ದಾರ್ ಅವರನ್ನು ಸೇನಾಜೀಪಿನ ಮುಂಭಾಗಕ್ಕೆ ಕಟ್ಟಿ ಪರೇಡ್ ನಡೆಸಿದ್ದರು. ಈ ನಡೆ ಅಂತಾರಾಷ್ಟ್ರೀಯ ಗಮನ ಸೆಳೆದಿದ್ದು,ತೀವ್ರ ಖಂಡನೆಗಳು ವ್ಯಕ್ತವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News