ಪಾಕಿಸ್ತಾನದ ಸೇತುವೆಯ ಚಿತ್ರ ಟ್ವೀಟ್ ಮಾಡಿ ಭೋಪಾಲದ ಸೇತುವೆ ಎಂದ ದಿಗ್ವಿಜಯ ಸಿಂಗ್

Update: 2018-06-11 15:15 GMT

ಮುಂಬೈ, ಜೂ. 11: ಮಧ್ಯಪ್ರದೇಶದ ಭೋಪಾಲದ ರೈಲ್ವೆ ಸೇತುವೆ ಎಂದು ಪಾಕಿಸ್ತಾನದ ಮೆಟ್ರೋ ಕಂಬದ ಹಳೆಯ ಚಿತ್ರ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ರವಿವಾರ ಕ್ಷಮೆ ಕೋರಿದ್ದಾರೆ.

 ರಾಜ್ಯದಲ್ಲಿರುವ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಸಿಂಗ್, ಭೋಪಾಲದ ಸುಭಾಶ್ ನಗರ ರೈಲ್ವೆ ಗೇಟ್‌ನ ಮೇಲ್ಸೇತುವೆಯ ಗುಣಮಟ್ಟದ ಬಗ್ಗೆ ಶನಿವಾರ ಪ್ರಶ್ನಿಸಿದ್ದಾರೆ. ಫ್ಲೈಓವರ್‌ನ ಎರಡು ಕಂಬಗಳು ಕುಸಿದು 18 ಜನರು ಸಾವಿಗೀಡಾಗಿದ್ದ ಇತ್ತೀಚೆಗಿನ ವಾರಣಾಸಿ ದುರಂತವನ್ನು ಉಲ್ಲೇಖಿಸಿದ್ದ ಅವರು, ‘‘ಬಿಜೆಪಿ ನಾಯಕನ ಮಾಗದರ್ಶನದಲ್ಲಿ ನಿರ್ಮಾಣ ನಡೆಯುತ್ತಿದೆ. ಹಾಗಾದರೆ ಈ ಎಲ್ಲ ದುರ್ಘಟನೆಗಳು ಯಾಕೆ ನಡೆಯುತ್ತಿವೆ? ಇಲ್ಲಿ ವಾರಣಾಸಿಯಂತಹ ದುರ್ಘಟನೆಗಳು ನಡೆಯದು ಎಂದು ಭಾವಿಸುತ್ತೇವೆ.’’ ಎಂದು ಟ್ವೀಟ್ ಮಾಡಿದ್ದರು.

ಆದಾಗ್ಯೂ, Altnews.in ದಿಗ್ವಿಜಯ್ ಸಿಂಗ್ ಅವರ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ ಹಾಗೂ ಅವರು ಪೋಸ್ಟ್ ಮಾಡಿರುವ ಭಾವಚಿತ್ರ ಭೋಪಾಲದ್ದು ಅಲ್ಲ. ಬದಲಾಗಿ ಪಾಕಿಸ್ತಾನ ಮೆಟ್ರೊದ ಹಾನಿಯಾದ ಕಂಬದ ಚಿತ್ರ ಎಂದಿದೆ. Altnews.in ಗೆ ಪ್ರತಿಕ್ರಿಯಿಸಿರುವ ಸಿಂಗ್, ‘‘ಇದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ಈ ಚಿತ್ರವನ್ನು ನನ್ನ ಓರ್ವ ಮಿತ್ರ ಕಳುಹಿಸಿದ. ನಾನು ಪರಿಶೀಲಿಸದೆ ಅಪ್‌ಲೋಡ್ ಮಾಡಿದ್ದೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News