ಕೇರಳ: ಭಾರೀ ಮಳೆಗೆ 16 ಬಲಿ

Update: 2018-06-11 15:19 GMT

ತಿರುವನಂತಪುರಂ, ಜೂ.11: ಕೇರಳದ ಕೆಲವೆಡೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮುಸಲಧಾರೆ ಮಳೆಯಿಂದ 6 ಕೋಟಿ ರೂ.ಗೂ ಹೆಚ್ಚಿನ ಬೆಳೆಹಾನಿ ಉಂಟಾಗಿದ್ದು, 16 ಮಂದಿ ಬಲಿಯಾಗಿದ್ದಾರೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದ್ದಾರೆ.

ಪ್ರಾಥಮಿಕ ಅಂದಾಜಿನ ಪ್ರಕಾರ 1,109 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ 61 ಮನೆಗಳು ಸಂಪೂರ್ಣ ನಾಶವಾಗಿವೆ. 33 ಕುಟುಂಬದ 122 ಮಂದಿಯನ್ನು ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.

188.41 ಹೆಕ್ಟೇರ್‌ಗಳಷ್ಟು ಕೃಷಿ ಭೂಮಿಯಲ್ಲಿದ್ದ ಫಸಲಿಗೆ ಹಾನಿಯಾಗಿದ್ದು 2,784 ಕೃಷಿಕರು ಬಾಧಿತರಾಗಿದ್ದಾರೆ ಎಂದು ವಿಪಕ್ಷ ಮುಖಂಡ ರಮೇಶ್ ಚೆನ್ನಿತಲ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಸಚಿವರು ತಿಳಿಸಿದರು. ಮೃತಪಟ್ಟವರ ಕುಟುಂಬದ ಸದಸ್ಯರಿಗೆ ರಾಜ್ಯದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತಲಾ 4 ಲಕ್ಷ ರೂ. ನೀಡಲಾಗುವುದು ಎಂದ ಸಚಿವರು, ಮನೆ ಹಾನಿಗೊಳಗಾದವರಿಗೂ ಪರಿಹಾರ ನೀಡಲಾಗುವುದು ಎಂದರು.

ಮಳೆ ಸಂಬಂಧಿ ದುರ್ಘಟನೆ ಸಂಭವಿಸಿದಾಗ ಸಂತ್ರಸ್ತರಿಗೆ ನೆರವಾಗಲು ನಿಯಂತ್ರಣಾ ಕೇಂದ್ರಗಳನ್ನು ತೆರೆಯಲಾಗಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತಕ್ಕೆ ಸಾಕಷ್ಟು ಹಣವನ್ನು ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.ಸದನಕ್ಕೆ ಮಾಹಿತಿ ನೀಡಿದ ಜಲಸಂಪನ್ಮೂಲ ಮತ್ತು ನೀರಾವರಿ ಸಚಿವ ಮ್ಯಾಥ್ಯೂ ಟಿ.ಥಾಮಸ್, ಕಡಲ್ಕೊರೆತ ಸಮಸ್ಯೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಮಧ್ಯೆ ಮಳೆ ಮುಂದುವರಿದಿದ್ದು ನೆಯ್ಯೆರ್ ಅಣೆಕಟ್ಟಿನಲ್ಲಿ ನೀರು ಗರಿಷ್ಟ ಮಟ್ಟವನ್ನು ತಲುಪಿದರೆ ಅಣೆಕಟ್ಟಿನ ಗೇಟುಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News