ಮಾನಸಸರೋವರ ಯಾತ್ರಾರ್ಥಿಗಳ ಪ್ರಥಮ ತಂಡಕ್ಕೆ ಹಸಿರು ನಿಶಾನೆ

Update: 2018-06-11 15:22 GMT

ಹೊಸದಿಲ್ಲಿ, ಜೂ.11: ಈ ವರ್ಷದ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳ ಪ್ರಥಮ ತಂಡಕ್ಕೆ ವಿದೇಶ ವ್ಯವಹಾರ ಇಲಾಖೆಯ ಸಹಾಯಕ ಸಚಿವ ವಿ.ಕೆ.ಸಿಂಗ್ ಹಸಿರು ನಿಶಾನೆ ತೋರಿ ಹಿಮಾಲಯದ ಕಠಿಣ ಹಾದಿಯಲ್ಲಿ ಸಾಗುವ ಯಾತ್ರೆ ಸುಗಮವಾಗಿ ಸಾಗಲಿ ಎಂದು ಹಾರೈಸಿದರು.

ಮಾನಸ ಸರೋವರ ತಲುಪಲು ಎರಡು ಮಾರ್ಗಗಳಿದ್ದು ಪ್ರಥಮ ತಂಡದಲ್ಲಿರುವ 60 ಯಾತ್ರಾರ್ಥಿಗಳು ಲಿಪು ಸರೋವರದ ಮೂಲಕ ಕೈಲಾಸ ಮಾನಸಸರೋವರ ತಲುಪಲಿದ್ದಾರೆ. ಇನ್ನೊಂದು ಮಾರ್ಗವು ಸಿಕ್ಕಿಂನ ನಾಥು ಲಾ ಪಾಸ್ ಮೂಲಕ ಸಾಗುತ್ತದೆ.

ಈ ವರ್ಷ 3,734 ಯಾತ್ರಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಲಾಟರಿ ಮೂಲಕ 1,500 ಮಂದಿಯನ್ನು ಆಯ್ಕೆ ಮಾಡಲಾಗಿದೆ. 60 ಯಾತ್ರಾರ್ಥಿಗಳ 18 ತಂಡವು ಲಿಪು ಸರೋವರದ ಮೂಲಕ ಸಾಗಿದರೆ, 50 ಯಾತ್ರಾರ್ಥಿಗಳ 10 ತಂಡವು ನಾಥು ಲಾ ಪಾಸ್ ಮೂಲಕ ಸಾಗಲಿದೆ. ಲಿಪು ಸರೋವರ ಮೂಲಕ ಸಾಗಿದರೆ ಮಾನಸ ಸರೋವರವನ್ನು 24 ದಿನದಲ್ಲಿ ತಲುಪಬಹುದು(ದಿಲ್ಲಿಯಲ್ಲಿ ಸಿದ್ಧತಾ ಕಾರ್ಯಕ್ಕೆ 3 ದಿನ ಸೇರಿ). ಈ ಮಾರ್ಗವು ಪ್ರಮುಖ ತಾಣಗಳಾದ ನಾರಾಯಣ ಆಶ್ರಮ ಹಾಗೂ ಪಾತಾಳ ಭುವನೇಶ್ವರ ಗುಹಾ ಮಂದಿರದ ಮೂಲಕ ಸಾಗುತ್ತದೆ.

 ಕಾಲ್ನಡಿಗೆಯಲ್ಲಿ ಸಾಗಲು ಕಷ್ಟವಾಗುವ ಹಿರಿಯರಿಗೆ ನಾಥು ಲಾ ಪಾಸ್ ಮೂಲಕ ಸಾಗುವ ದಾರಿ ಸೂಕ್ತವಾಗಿದೆ. ಈ ದಾರಿಯಲ್ಲಿ ವಾಹನದ ಮೂಲಕ ಪ್ರಯಾಣಿಸಬಹುದು. ಗ್ಯಾಂಗ್‌ಟಕ್‌ನಿಂದ ಪ್ರಕೃತಿ ರಮಣೀಯ ತಾಣಗಳಾದ ಹಾಂಗು ಸರೋವರ, ಟಿಬೆಟಿಯನ್ ಪ್ರಸ್ಥಭೂಮಿ ಮೂಲಕ ಈ ದಾರಿ ಸಾಗುತ್ತದೆ. ಈ ದಾರಿಯ ಪ್ರಯಾಣದ ಅವಧಿ 21 ದಿನಗಳು(ಇದರಲ್ಲಿ ದಿಲ್ಲಿಯಲ್ಲಿ ಸಿದ್ಧತಾ ಕಾರ್ಯಕ್ಕೆ 3 ದಿನ ಸೇರಿ). ಈ ಬಾರಿ ಇಬ್ಬರು ಸಂಪರ್ಕಾಧಿಕಾರಿಗಳು ಯಾತ್ರಾರ್ಥಿಗಳ ಜೊತೆ ಇರುತ್ತಾರೆ ಎಂದು ಸಚಿವ ರು ತಿಳಿಸಿದ್ದಾರೆ.

18ರಿಂದ 70 ವರ್ಷದೊಳಗಿನವರು ಕೈಲಾಸ ಮಾನಸ ಸರೋವರ ಯಾತ್ರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ದಿಲ್ಲಿ ಮತ್ತು ಸಿಕ್ಕಿಂ ಸರಕಾರದ ಜೊತೆಗೆ ವಿದೇಶ ವ್ಯವಹಾರ ಇಲಾಖೆ, ಗೃಹ ಇಲಾಖೆ ಹಾಗೂ ರಕ್ಷಣಾ ಇಲಾಖೆ ಯಾತ್ರಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News