ಸಮುದ್ರ ಕಸ ಪ್ರಮಾಣದ ಅಧ್ಯಯನ ನಡೆಸಲಿರುವ ಭೂವಿಜ್ಞಾನ ಇಲಾಖೆ
ಪಣಜಿ, ಜೂ.11: ಕೇಂದ್ರದ ಭೂವಿಜ್ಞಾನ ಸಚಿವಾಲಯವು ಸಮುದ್ರ ಕಸದ ಪ್ರಮಾಣವನ್ನು ಅಂದಾಜಿಸುವ ಹಾಗೂ ಕಸದ ಮೂಲದ ಬಗ್ಗೆ ಅಧ್ಯಯನ ಕಾರ್ಯ ಆರಂಭಿಸಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತವು ವಿಶ್ವಸಂಸ್ಥೆಯ ‘ಸ್ವಚ್ಛ ಸಮುದ್ರ’ ಅಭಿಯಾನಕ್ಕೆ ಕೈಜೋಡಿಸಿದ್ದು ಚೆನ್ನೈ ಮೂಲದ ಸಂಸ್ಥೆ ಹಾಗೂ ರಾಷ್ಟ್ರೀಯ ಸಮುದ್ರ ಮಾಹಿತಿ ಸೇವಾ ಕೇಂದ್ರವು ಸಮುದ್ರ ಕಸದ ಕುರಿತು ಅಧ್ಯಯನ ಕಾರ್ಯ ನಡೆಸಲಿದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ತಿಳಿಸಿದ್ದಾರೆ.
ಸಮುದ್ರದಲ್ಲಿ ಕಂಡು ಬರುವ ಪ್ಲಾಸ್ಟಿಕ್, ಸೂಕ್ಷ್ಮ ಪ್ಲಾಸ್ಟಿಕ್, ಸಮುದ್ರ ಕಸದ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾರತವು ಈಗಾಗಲೇ ವಿಶ್ವಸಂಸ್ಥೆಯ ಸ್ವಚ್ಛ ಸಮುದ್ರ ಅಭಿಯಾನದಲ್ಲಿ ಕೈಜೋಡಿಸಿದ್ದು ಸಮುದ್ರ ಕಸದ ಕುರಿತು ಶೀಘ್ರವೇ ಹೊಸ ಕಾರ್ಯವನ್ನು ನಡೆಸಲಿದ್ದೇವೆ ಎಂದು ರಾಜೀವನ್ ತಿಳಿಸಿದ್ದಾರೆ. ಗೋವಾದ ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆಯಲ್ಲಿ ನಡೆದ ಭಾರತ-ಅಮೆರಿಕ ವಿಚಾರಸಂಕಿರಣದ ನೇಪಥ್ಯದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ಸಮುದ್ರ ತೀರದಲ್ಲಿ ಸಂಗ್ರಹವಾಗುತ್ತಿರುವ ಸಮುದ್ರ ಕಸದ ಪ್ರಮಾಣವನ್ನು ಅಂದಾಜಿಸಿ ಕಸದ ಮೂಲವನ್ನು ಪತ್ತೆಹಚ್ಚಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ನೆರವು ಪಡೆಯಲಾಗುತ್ತದೆ . ಸಮುದ್ರ ಮಾಲಿನ್ಯವು ಒಂದು ಗಂಭೀರವಾದ ರಾಷ್ಟ್ರೀಯ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಸಮುದ್ರ ತೀರದುದ್ದಕ್ಕೂ ಸಮುದ್ರದ ನೀರಿನ ಗುಣಮಟ್ಟವನ್ನು ಅಂದಾಜುಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಕಳೆದ 25 ವರ್ಷದಿಂದ ಈ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ. ಇದು ಬಹಳ ಪರಿಣಾಮಕಾರಿಯಾಗಿದ್ದು ಈಗ ನೀರಿನ ಗುಣಮಟ್ಟ ಎಲ್ಲಿ ಉತ್ತಮವಾಗಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಿದೆ ಎಂದವರು ಮಾಹಿತಿ ನೀಡಿದರು.
ಇದೇ ಸಂದರ್ಭ ಮಾತನಾಡಿದ ಅಮೆರಿಕದ ‘ನ್ಯಾಷನಲ್ ಓಶಿಯಾನಿಕ್ ಆ್ಯಂಡ್ ಅಟೊಮೊಸ್ಫೆರಿಕ್ ಎಡ್ಮಿನಿಸ್ಟ್ರೇಷನ್(ಎನ್‌ಒಎಎ)ನ ಹಂಗಾಮಿ ಮುಖ್ಯ ವಿಜ್ಞಾನಿ ಕ್ರೆಗ್ ಮೆಕ್ಲೀನ್, ವಿಶ್ವದಾದ್ಯಂತ ಪ್ಲಾಸ್ಟಿಕ್ ಮಾಲಿನ್ಯ ಪ್ರಮುಖ ಸಮಸ್ಯೆಯಾಗಿದೆ ಎಂದರು. ಹಲವು ರಾಷ್ಟ್ರಗಳು, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಮನುಕುಲದ ಭವಿಷ್ಯವನ್ನು ಹಾಗೂ ಸಮುದ್ರವನ್ನು ರಕ್ಷಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ದೃಢಪಡಿಸಿವೆ. ಪ್ಲಾಸ್ಟಿಕ್‌ನ ಮರುಬಳಕೆಯ ಬಗ್ಗೆ ಪ್ಲಾಸ್ಟಿಕ್ ಉತ್ಪಾದಕರು ಹಾಗೂ ಗ್ರಾಹಕರು ಯೋಚಿಸುತ್ತಿರುವುದು ಒಂದು ಧನಾತ್ಮಕ ಬೆಳವಣಿಗೆಯಾಗಿದೆ. ಇಂತಹ ಬದಲಾವಣೆ ನಮ್ಮಲ್ಲಿ ಆಶಾವಾದ ಮೂಡಿಸುತ್ತದೆ ಎಂದವರು ಹೇಳಿದ್ದಾರೆ. ಭೂಪರಿವೀಕ್ಷಣೆ ಹಾಗೂ ಭೂವಿಜ್ಞಾನ ವಿಷಯದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಸಹಯೋಗ ಹೊಂದುವ ಕುರಿತು ಭಾರತ ಮತ್ತು ಅಮೆರಿಕ 2008ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ.