ಪುತ್ರ ಸಾವನ್ನಪ್ಪಿದ 20 ವರ್ಷಗಳ ನಂತರ ತಾಯಿಗೆ 15 ಲಕ್ಷ ರೂ. ಪಾವತಿಸಿದ ಆಸ್ಪತ್ರೆ

Update: 2018-06-12 09:48 GMT

ಚೆನ್ನೈ, ಜೂ. 12: ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಚೆನ್ನೈ ಗ್ರಾಹಕ ನ್ಯಾಯಾಲಯವು 20 ವರ್ಷದ ಹಿಂದೆ ಸಾವಿಗೀಡಾದ ವ್ಯಕ್ತಿಯೊಬ್ಬನ ತಾಯಿಗೆ 15 ಲಕ್ಷ ರೂ. ಪಾವತಿಸುವಂತೆ ಇಲ್ಲಿನ ಕೆಕೆಆರ್ ಇಎನ್‌ಟಿ ಆಸ್ಪತ್ರೆಗೆ ಆದೇಶಿಸಿದೆ.

ಜನವರಿ 11, 1999ರಂದು ಈಶ್ವರಿ ಕಣ್ಣನ್ ಎಂಬ ಮಹಿಳೆ ಕಿವಿಯ ಸಮಸ್ಯೆ ಎದುರಿಸುತ್ತಿದ್ದ ತನ್ನ 28 ವರ್ಷದ ಪುತ್ರ ಕೆ ರವಿಕುಮಾರ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮರುದಿನ ಆಸ್ಪತ್ರೆಯಲ್ಲಿ ರೋಗಿಯ ಜತೆಗಿದ್ದ ಆತನ ಸೋದರಿಗೆ ತಿಳಿಸದೆಯೇ ಆತನನ್ನು ಶಸ್ತ್ರಕ್ರಿಯೆ ಕೊಠಡಿಗೆ ಕೊಂಡೊಯ್ಯಲಾಗಿತ್ತು. ಶಸ್ತ್ರಕ್ರಿಯೆಯ ನಂತರ ತೀವ್ರ ತಲೆ ನೊವಿಗೆ ತುತ್ತಾಗಿದ್ದ ರವಿಕುಮಾರ್‌ನನ್ನು ಫೆಬ್ರವರಿ 15, 1999ರಂದು ಚೆನ್ನೈನ ಸರಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಲ್ಲಿ ಎರಡು ದಿನಗಳ ನಂತರ ಆತ ‘ಪೋಸ್ಟ್ ಮ್ಯಾಸ್ಟೋಡೆಕ್ಟಮಿ ಮೆನಿಂಜೈಟಿಸ್’ ನಿಂದ ಮೃತ ಪಟ್ಟಿದ್ದಾನೆಂದು ಹೇಳಲಾಗಿತ್ತು.

ಯುವಕನ ತಾಯಿ ಆತನನ್ನು ಮೊದಲು ದಾಖಲಿಸಲ್ಪಟ್ಟಿದ್ದ ಕೆಕೆಆರ್ ಆಸ್ಪತ್ರೆಯ ವಿರುದ್ಧ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದು ಆಕೆಯ ವಾದವನ್ನು ಎತ್ತಿ ಹಿಡಿದ ನ್ಯಾಯಾಲಯ ಪುತ್ರನ ಸಾವಿನಿಂದ ಆಕೆಗಾದ ಮಾನಸಿಕ ಯಾತನೆಗೆ ಪರಿಹಾರ ನೀಡುವುದಲ್ಲದೆ ಬೇರ ಯಾವುದೇ ಪರ್ಯಾಯ ಕ್ರಮದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಹೇಳಿ ಪರಿಹಾರ ನೀಡುವಂತೆ ಆಸ್ಪತ್ರೆಗೆ ತನ್ನ ಮೇ 31ರ ಆದೇಶದಲ್ಲಿ ತಿಳಿಸಿದೆ. ಆ ಆಸ್ಪತ್ರೆ ಅನಧಿಕೃತವಾಗಿ ಹಲವಾರು ಶಸ್ತ್ರಕ್ರಿಯೆ ನಡೆಸುತ್ತಿತ್ತೆಂದು ದೂರುದಾರರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News