ತಾಜ್ ಮಹಲ್‌ನ ಪಶ್ಚಿಮ ದ್ವಾರವನ್ನು ಕಿತ್ತೆಸೆದ ವಿಹಿಂಪ ಕಾರ್ಯಕರ್ತರು

Update: 2018-06-12 18:07 GMT

ಆಗ್ರಾ,ಜೂ.12: ಭಾರತೀಯ ಪುರಾತತ್ತ್ವ ಇಲಾಖೆ(ಎಎಸ್‌ಐ)ಯು ತಾಜ್‌ಮಹಲ್ ಆವರಣದಲ್ಲಿ ನಿರ್ಬಂಧಿತ ಪ್ರದೇಶವನ್ನು ನಿರ್ಮಿಸುವಾಗ 400 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯಕ್ಕೆ ಹೋಗುವ ಮಾರ್ಗಕ್ಕೆ ತಡೆಯನ್ನುಂಟು ಮಾಡಿದೆ ಎಂದು ಆರೋಪಿಸಿ ವಿಹಿಂಪ ಕಾರ್ಯಕರ್ತರ ಗುಂಪೊಂದು ರವಿವಾರ ಈ ಭವ್ಯ ಸ್ಮಾರಕದ ಪಶ್ಚಿಮ ದ್ವಾರವನ್ನು ಕಿತ್ತೆಸೆದು ದಾಂಧಲೆಯನ್ನು ನಡೆಸಿದೆ. ಈ ಬಗ್ಗೆ ಎಎಸ್‌ಐ ಪೊಲೀಸ್ ದೂರನ್ನು ದಾಖಲಿಸಿದೆ.

ಸುತ್ತಿಗೆಗಳು ಮತ್ತು ಕಬ್ಬಿಣದ ಸಲಾಕೆಗಳಿಂದ ಸಜ್ಜಿತರಾಗಿದ್ದ ಕಾರ್ಯಕರ್ತರು ಪ್ರವೇಶದ್ವಾರವನ್ನು ಕೀಳುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದೆ. ಬಸಾಯಿ ಘಾಟ್‌ನಲ್ಲಿರುವ ಸಿದ್ಧೇಶ್ವರ ಮಹಾದೇವ ದೇವಸ್ಥಾನಕ್ಕೆ ಪರ್ಯಾಯ ಮಾರ್ಗವಿದೆ ಎಂದು ಪೊಲೀಸರು ತಿಳಿಸಿದರೆ,ಅದು ತುಂಬ ಇಕ್ಕಟ್ಟಿನದಾಗಿದ್ದು, ಅದರಲ್ಲಿ ನಡೆದಾಡುವುದೂ ಸಾಧ್ಯವಿಲ್ಲ ಎನ್ನುವುದು ವಿಹಿಂಪ ಕಾರ್ಯಕರ್ತರ ವಾದವಾಗಿದೆ.

ವಿಹಿಂಪ ಕಾರ್ಯಕರ್ತರು ಪ್ರವೇಶದ್ವಾರವನ್ನು ಕಿತ್ತು ಸುಮಾರು 50 ಮೀ.ದೂರದಲ್ಲಿ ಎಸೆದಿದ್ದರು. ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿದ ತಾಜ್ ಸುರಕ್ಷತಾ ಪೊಲೀಸರ ತಂಡವು ಹೆಚ್ಚಿನ ಹಾನಿಯನ್ನು ತಪ್ಪಿಸಿದೆ ಎಂದು ಪೊಲೀಸ್ ಅಧಿಕಾರಿ ಪ್ರಭಾತ ಕುಮಾರ ತಿಳಿಸಿದರು.

ತಾಜ್‌ಮಹಲ್ ಆವರಣದಲ್ಲಿನ ಮತ್ತು ಸುತ್ತುಮುತ್ತಲಿನ ಹಿಂದೂ ಸಂಸ್ಕೃತಿಗೆ ಸಂಬಂಧಿಸಿದ ಎಲ್ಲವನ್ನೂ ಎಎಸ್‌ಐ ತೆಗೆಯುತ್ತಿರುವುದರಿಂದ ತಾವು ಈ ಕ್ರಮವನ್ನು ಕೈಗೊಂಡಿದ್ದಾಗಿ ವಿಹಿಂಪ ಬೃಜ್ ಪ್ರಾಂತ್ ನಾಯಕ ರವಿ ದುಬೆ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News