ಏಶ್ಯಾಕಪ್ ಚಾಂಪಿಯನ್ ಬಾಂಗ್ಲಾದೇಶಕ್ಕೆ ನಗದು ಬಹುಮಾನ

Update: 2018-06-12 18:30 GMT

ಢಾಕಾ, ಜೂ.12: ಏಶ್ಯಾಕಪ್ ಟ್ವೆಂಟಿ-20 ಟೂರ್ನಮೆಂಟ್ ಫೈನಲ್‌ನಲ್ಲಿ ಭಾರತ ವಿರುದ್ಧ ರೋಚಕ ಜಯ ಸಾಧಿಸಿ ಮೊದಲ ಬಾರಿ ಚಾಂಪಿಯನ್ ಕಿರೀಟ ಧರಿಸಿರುವ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರ್ತಿಯರಿಗೆ ನಗದು ಬಹುಮಾನ ನೀಡಿ ಗೌರವಿಸಲು ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಕೌಲಾಲಂಪುರದಲ್ಲಿ ರವಿವಾರ ನಡೆದ ಏಶ್ಯಾಕಪ್ ಫೈನಲ್‌ನಲ್ಲಿ ಆರು ಬಾರಿಯ ಚಾಂಪಿಯನ್ ಭಾರತವನ್ನು 3 ವಿಕೆಟ್‌ಗಳಿಂದ ಮಣಿಸಿರುವ ಬಾಂಗ್ಲಾದೇಶದ ಮಹಿಳಾ ಕ್ರಿಕೆಟ್ ತಂಡ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿತ್ತು. ಟೂರ್ನಮೆಂಟ್‌ನ ಗ್ರೂಪ್ ಹಂತದಲ್ಲಿ ಭಾರತವನ್ನು ಸೋಲಿಸಿದ್ದ ಬಾಂಗ್ಲಾದೇಶ ಫೈನಲ್‌ನಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಆಘಾತ ನೀಡಿತ್ತು. ಸೋಮವಾರ ಸ್ವದೇಶಕ್ಕೆ ವಾಪಸಾಗಿರುವ ಬಾಂಗ್ಲಾ ಕ್ರಿಕೆಟ್ ಆಟಗಾರ್ತಿಯರಿಗೆ ವೀರೋಚಿತ ಸ್ವಾಗತ ನೀಡಲಾಯಿತು. ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಯು ತಂಡಕ್ಕೆ 20 ಮಿಲಿಯನ್ ಟಾಕಾ(236,000 ಡಾಲರ್) ನಗದು ಬಹುಮಾನ ಹಾಗೂ ವೇತನದಲ್ಲಿ ಹೆಚ್ಚಳ ಮಾಡುವ ಭರವಸೆ ನೀಡಿದೆ. ಪ್ರತಿ ಆಟಗಾರ್ತಿಯರು ಬಹುಮಾನದ ರೂಪವಾಗಿ ಒಂದು ಮಿಲಿಯನ್ ಟಾಕಾ(14,800 ಡಾಲರ್) ಸ್ವೀಕರಿಸಲಿದ್ದಾರೆ. ಸುಮಾರು 75,000 ಡಾಲರ್ ಕೋಚಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಸಿಬ್ಬಂದಿ ಹಂಚಿಕೊಳ್ಳಲಿದ್ದಾರೆ ಎಂದು ಬಿಸಿಪಿ ವಕ್ತಾರ ಜಲಾಲ್ ಯೂನುಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News