ವರ್ಚುವಲ್ ಐಡಿ, ಕನಿಷ್ಟ ಕೆವೈಸಿ ಉಪಯೋಗಿಸುವಂತೆ ದೂರಸಂಪರ್ಕ ಸಂಸ್ಥೆಗಳಿಗೆ ಕೇಂದ್ರ ಸೂಚನೆ

Update: 2018-06-13 14:56 GMT

ಹೊಸದಿಲ್ಲಿ, ಜೂ.13: ಜುಲೈ ಒಂದರಿಂದ ಅನುಷ್ಠಾನಕ್ಕೆ ಬರಲಿರುವ ವರ್ಚುವಲ್ ಐಡಿ ವ್ಯವಸ್ಥೆಗೆ ಈಗಲೇ ಒಗ್ಗಿಕೊಳ್ಳುವಂತೆ ದೂರಸಂಪರ್ಕ ಸಂಸ್ಥೆಗಳಿಗೆ ಸೂಚಿಸಿರುವ ಕೇಂದ್ರ ಸರಕಾರ ವರ್ಚುವಲ್ ಐಡಿ ಮತ್ತು ಕನಿಷ್ಟ ಕೆವೈಸಿ ಉಪಯೋಗಿಸುವಂತೆ ತಿಳಿಸಿದೆ.

ವರ್ಚುವಲ್ ಐಡಿ ಬಳಕೆಯಿಂದ ಬಳಕೆದಾರರು ಆಧಾರ್ ಸಂಖ್ಯೆಯನ್ನು ಬಳಸುವ ಅಗತ್ಯ ಬೀಳುವುದಿಲ್ಲ. ಗ್ರಾಹಕರ ಹದಿನಾರು ಅಂಕೆಯ ಆಧಾರ್ ಸಂಖ್ಯೆಯನ್ನು ಹೊಂದಿರುವ ವರ್ಚುವಲ್ ಐಡಿ ಪರಿಕಲ್ಪನೆ ಮುಂದಿನ ತಿಂಗಳಿಂದ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಈ ವ್ಯವಸ್ಥೆಯಿಂದ ಆಧಾರ್ ದತ್ತಾಂಶದ ಸಂಗ್ರಹ ಮತ್ತು ಶೇಖರಣೆಯ ಬಗ್ಗೆ ಇರುವ ಗೊಂದಲಕ್ಕೆ ಅಂತ್ಯ ಹಾಡಲಿದ್ದು, ಆಧಾರ್ ಖಾಸಗಿತನ ಮತ್ತು ಭದ್ರತೆಯನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಯುಐಡಿಎಐ ಸೂಚಿಸಿರುವ ಬದಲಾವಣೆಗಳನ್ನು ಎಲ್ಲ ಟೆಲಿಕಾಂ ಸಂಸ್ಥೆಗಳು ಪಾಲಿಸಬೇಕು. ಹೊಸ ಮೊಬೈಲ್ ಸಂಪರ್ಕ ಪಡೆಯಲು ಮತ್ತು ಸದ್ಯ ಇರುವ ಮೊಬೈಲ್ ಗ್ರಾಹಕರ ಮರುಪರಿಶೀಲನೆ ನಡೆಸುವ ಸಮಯದಲ್ಲಿ ಆಧಾರ್ ಆಧಾರಿತ ಇಕೆವೈಸಿ ಪ್ರಕ್ರಿಯೆಯ ಸಮಯದಲ್ಲಿ ಆಧಾರ್ ಸಂಖ್ಯೆಗೆ ಬದಲಾಗಿ ವರ್ಚುವಲ್ ಐಡಿಯನ್ನು ಬಳಸಬೇಕು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಆಧಾರ್ ಸಂಖ್ಯೆಯನ್ನು ಅಥವಾ ವರ್ಚುವಲ್ ಐಡಿಯನ್ನು ನೀಡುವ ನಿರ್ಧಾರವನ್ನು ಅಂತಿಮವಾಗಿ ಗ್ರಾಹಕರಿಗೆ ಬಿಡಬೇಕು ಎಂದು ಇಲಾಖೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News