ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಭೈಯ್ಯು ಮಹಾರಾಜ್ ಡೆತ್ ನೋಟ್ ನಲ್ಲಿ ಇದ್ದದ್ದೇನು?

Update: 2018-06-13 15:32 GMT

ಇಂದೋರ್, ಜೂ.13: ಮಂಗಳವಾರದಂದು ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಆಧ್ಯಾತ್ಮಿಕ ಗುರು ಭೈಯ್ಯು ಮಹಾರಾಜ್ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ಮರಣ ಪತ್ರವನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ. ಅನೇಕ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳನ್ನು ಅನುಯಾಯಿಗಳಾಗಿ ಹೊಂದಿದ್ದ 50ರ ಹರೆಯದ ಮಹಾರಾಜ್ ತಮ್ಮ ಮರಣ ಪತ್ರದಲ್ಲಿ, “ತೀವ್ರ ಸುಸ್ತಾಗಿದ್ದು, ಸಾಕಾಗಿ ಹೋಗಿದೆ” ಎಂದು ಬರೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಅನುಯಾಯಿಗಳಿಂದ ಭಯ್ಯೂಜಿ ಮಹಾರಾಜ್ ಎಂದೇ ಕರೆಯಲ್ಪಡುತ್ತಿದ್ದ ಮಧ್ಯಪ್ರದೇಶದ ಶುಜಲ್ಪುರದಲ್ಲಿ ಜನಿಸಿದ ಉದಯ್‌ಸಿನ್ಹ ದೇಶ್ಮುಕ್ ವೃತ್ತಿ ಜೀವನದ ಆರಂಭದಲ್ಲಿ ಮಾಡೆಲ್ ಆಗಿ ಕೆಲಸ ಮಾಡಿದ್ದರು.

2015ರಲ್ಲಿ ಮೊದಲ ಪತ್ನಿಯ ಮರಣದ ನಂತರ ಕಳೆದ ವರ್ಷ ಎರಡನೇ ವಿವಾಹವಾಗಿದ್ದ ಮಹಾರಾಜ್ ಮತ್ತು ಅವರ ಪುತ್ರಿಯ ಮಧ್ಯೆ ಸಂಬಂಧ ಚೆನ್ನಾಗಿರಲಿಲ್ಲ ಎಂಬ ಮಾತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದ ಬಿಜೆಪಿ ಸರಕಾರ ಐದು ಆಧ್ಯಾತ್ಮಿಕ ಗುರುಗಳಿಗೆ ಸಚಿವ ಸ್ಥಾನವನ್ನು ನೀಡಿದಾಗ, ಸಂತರಿಗೆ ಪದವಿಯ ಬಗ್ಗೆ ಮೋಹವಿಲ್ಲ ಎಂದು ಹೇಳುವ ಮೂಲಕ ಹುದ್ದೆಯನ್ನು ತಿರಸ್ಕರಿಸಿದ್ದರು. ಭೈಯ್ಯೂಜಿ ಮಹಾರಾಜ್ ಸಾವಿಗೆ ಬಿಜೆಪಿ ಸರಕಾರವನ್ನು ದೂಷಿಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್ ಸರಕಾರ ನರ್ಮದಾ ಬಳಿ ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯ ಕುರಿತು ಚಿಂತಿತರಾಗಿದ್ದ ಮಹಾರಾಜ್ ಈ ಬಗ್ಗೆ ನನಗೆ ತಿಳಿಸಿದ್ದರು. ಈ ವಿಷಯದ ಕುರಿತು ಬಾಯ್ತೆರೆಯದಂತೆ ಓಲೈಸಲೆಂದೇ ಅವರಿಗೆ ಸಚಿವ ಪದವಿಯನ್ನು ನೀಡಲು ಸರಕಾರ ಮುಂದಾಗಿತ್ತು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News