ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ: ಸುಪ್ರೀಂ
ಹೊಸದಿಲ್ಲಿ, ಜೂ.13: ಆನ್‌ಲೈನ್ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ) ಸಮಯದಲ್ಲಿ ತಾಂತ್ರಿಕ ತೊಂದರೆಗೆ ಒಳಗಾದ ವಿದ್ಯಾರ್ಥಿಗಳಿಗೆ ಕೃಪಾಂಕಗಳನ್ನು ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಸುಧಾರಿತ ಕಾನೂನು ಶಿಕ್ಷಣ ರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿದೆ.
ಆಮೂಲಕ ಪರೀಕ್ಷೆಯಲ್ಲಿ ಭಾಗವಹಿಸಿದ್ದ 4,690 ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಕೇರಳ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಂ.ಆರ್ ಹರಿಹರನ್ ನಾಯರ್ ನೇತೃತ್ವದ ಕುಂದುಕೊರತೆ ಪರಿಹಾರ ಸಮಿತಿ ಜಾರಿ ಮಾಡಿರುವ ನಿಯಮದ ಪ್ರಕಾರ ಆದೇಶ ನೀಡಿದ ನ್ಯಾಯಾಧೀಶ ಯು.ಯು ಲಲಿತ್ ಹಾಗೂ ದೀಪಕ್ ಗುಪ್ತಾ ನೇತೃತ್ವದ ರಜಾದಿನಗಳ ಪೀಠ ಈ ವಿದ್ಯಾರ್ಥಿಗಳು 19 ಕಾನೂನು ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುವಂತೆ ಪರಿಷ್ಕೃತ ಅಂಕಪಟ್ಟಿಯನ್ನು ರಚಿಸುವಂತೆ ಎನ್‌ಯುಎಎಲ್‌ಎಸ್‌ಗೆ ಸೂಚಿಸಿದೆ.
ಮೊದಲ ಸುತ್ತಿನ ಸಮಾಲೋಚನೆಯ ನಂತರ ಕಾಲೇಜಿಗೆ ದಾಖಲಾತಿಯನ್ನು ಅಂತಿಮಗೊಳಿಸಿರುವ ವಿದ್ಯಾರ್ಥಿಗಳಿಗೆ ಇದರಿಂದ ಯಾವುದೇ ತೊಂದರೆಯಾಗಬಾರದು. ಆದರೆ ಮುಂದಿನ ದಾಖಲಾತಿಗಳನ್ನು ಪರಿಷ್ಕೃತ ಪಟ್ಟಿಯ ಆಧಾರದಲ್ಲೇ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಮೇ 13ರಂದು ಎನ್‌ಯುಎಎಲ್‌ಎಸ್ ಕೊಚ್ಚಿ ನಡೆಸಿದ ಸಿಎಲ್‌ಎಟಿ 2018 ಪರೀಕ್ಷೆಯಲ್ಲಿ 54,464 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,690 ವಿದ್ಯಾರ್ಥಿಗಳು ತಾಂತ್ರಿಕ ದೋಷದಿಂದಾಗಿ ತಮಗೆ ಸಂಪೂರ್ಣ ಎರಡು ಗಂಟೆಗಳ ಕಾಲ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ದೂರು ನೀಡಿದ್ದರು. ಪರೀಕ್ಷೆ ಮುಗಿದ ಕೂಡಲೇ ಸಂಕಷ್ಟಕ್ಕೀಡಾದ ವಿದ್ಯಾರ್ಥಿಗಳು ವಿವಿಧ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೂ ಮರುಪರೀಕ್ಷೆ ನಡೆಸುವಂತೆ ಮೊರೆ ಹೋಗಿದ್ದರು.