ಬಳಕೆದಾರರ ಕಂಪ್ಯೂಟರ್ ಮೌಸನ್ನು ಟ್ರ್ಯಾಕ್ ಮಾಡುತ್ತಿದೆ ಫೇಸ್ ಬುಕ್!

Update: 2018-06-13 16:32 GMT

ನ್ಯೂಯಾರ್ಕ್, ಜೂ.13: ಡಾಟಾ ಸೆಕ್ಯುರಿಟಿ ಆತಂಕಕಾರಿ ವಿಚಾರವಾಗಿರುವಂತೆಯೇ ಸಾಮಾಜಿಕ ಜಾಲತಾಣ ಸಂಸ್ಥೆ ಅಮೆರಿಕಾದ ಸೆನೆಟ್ ಸಮಿತಿ ಕೇಳಿದ 2,000 ಪ್ರಶ್ನೆಗಳಿಗೆ ನೀಡಿದ ತನ್ನ 225 ಪುಟಗಳ ಉತ್ತರದಲ್ಲಿ ಫೇಸ್ ಬುಕ್ ತಾನು ಬಳಕೆದಾರರು ಕಂಪ್ಯೂಟರ್ ಮೌಸ್ ಹೇಗೆ ಉಪಯೋಗಿಸುತ್ತಾರೆಂಬುದನ್ನೂ ಟ್ರ್ಯಾಕ್ ಮಾಡುತ್ತದೆ. ಈ ಮೂಲಕ ತನ್ನ ವ್ಯವಸ್ಥೆ ಮಾನವರು ಮತ್ತು ವೆಬ್ ರೋಬೊಟ್ ಗಳನ್ನು ಗುರುತಿಸಲು ಸಹಾಯ ಮಾಡಿದೆ ಎಂದು ತಿಳಿಸಿದೆ.

ಕಂಪ್ಯೂಟರ್, ಫೋನ್ ಮತ್ತಿತರ ಅಂತರ್ಜಾಲ ಸಂಪರ್ಕವಿರುವ ಸಾಧನಗಳು ಹಾಗೂ ಮೌಸ್ ಗಳ ಚಲನೆಯ ರೀತಿಯನ್ನು ಟ್ರ್ಯಾಕ್ ಮಾಡಿ ಆ ಮೂಲಕ  ಬಳಕೆದಾರರು ತನ್ನ ಸೇವೆಗಳನ್ನು ಹೇಗೆ ಬಳಸುತ್ತಿದ್ದಾರೆಂದು ತಿಳಿಯಲು ಪ್ರಯತ್ನಿಸಿದ್ದಾಗಿ ಹಾಗೂ ಈ ಮೂಲಕ ನಿರ್ದಿಷ್ಟ ಬಳಕೆದಾರರಿಗೆ ಇಷ್ಟವಾದ ಮಾಹಿತಿಯೊದಗಿಸಿದ್ದಾಗಿ ಸಂಸ್ಥೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.

ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್, ಹಾರ್ಡ್ ವೇರ್, ಸಾಫ್ಟ್ ವೇರ್, ಬ್ಯಾಟರಿ ಮಟ್ಟ, ಸಿಗ್ನಲ್ ಮಟ್ಟ, ಸ್ಟೋರೇಜ್ ಸ್ಪೇಸ್, ಫೈಲ್ ಹೆಸರುಗಳು, ಸಾಧನಗಳ ಐಡಿ, ಬ್ರೌಸರ್ ಹಾಗೂ ಬ್ರೌಸರ್ ಪ್ಲಗ್-ಇನ್ ಗಳ ಮಾಹಿತಿ ಕೂಡ ಸಂಗ್ರಹಿಸಲಾಗುತ್ತಿದೆ ಎಂದು ಫೇಸ್ ಬುಕ್ ಒಪ್ಪಿಕೊಂಡಿದೆ.

ಬಳಕೆದಾರರ ಲಿಂಗ, ಅವರು ತಮ್ಮ ಫ್ರೆಂಡ್ ಲಿಸ್ಟ್ ನಿಂದ ತೆಗೆದಿರುವ ಹೆಸರು ಹಾಗೂ ಅವರು ಕ್ಲಿಕ್ ಮಾಡುವ ಜಾಹೀರಾತುಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂಬುದನ್ನೂ ಕಂಪೆನಿ ಒಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News