ರಾಹುಲ್ ಗಾಂಧಿ ಏರ್ಪಡಿಸಿದ ಇಫ್ತಾರ್ ಕೂಟದಲ್ಲಿ ಭಾಗಿಯಾದ ಪ್ರಣಬ್ ಮುಖರ್ಜಿ

Update: 2018-06-13 18:06 GMT

ಹೊಸದಿಲ್ಲಿ, ಜೂ.13: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಬಳಿಕ ಏರ್ಪಡಿಸಿದ ಮೊದಲ ಇಫ್ತಾರ್ ಕೂಟದಲ್ಲಿ ಕಾಂಗ್ರೆಸ್ ಘಟಾನುಘಟಿ ನಾಯಕರು ಭಾಗವಹಿಸಿದರೆ ಇತರ ಪಕ್ಷಗಳ ನಾಯಕರು ಕೂಡಾ ಭಾಗಿಯಾಗುವ ಮೂಲಕ ಒಗ್ಗಟ್ಟು ಮತ್ತು ಬಲವನ್ನು ಪ್ರದರ್ಶಿಸಿದರು.

ಆದರೆ ತಾಜ್ ಮಹಲ್ ಹೊಟೇಲ್‌ನಲ್ಲಿ ನಡೆದ ಈ ಇಫ್ತಾರ್ ಸಮಾರಂಭದ ಕೇಂದ್ರ ಬಿಂದುವಾಗಿದ್ದುದು ಮಾತ್ರ ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಪ್ರಣಬ್ ಮುಖರ್ಜಿ. ಇತ್ತೀಚೆಗೆ ನಡೆದ ಆರ್‌ಎಸ್‌ಎಸ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ತನ್ನ ಪಕ್ಷದವರಿಂದಲೇ ಟೀಕೆಗೊಳಗಾಗಿದ್ದ ಮುಖರ್ಜಿ ಸಮಾರಂಭದಲ್ಲಿ ಭಾಗಿಯಾಗಿದ್ದುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿತು. ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರಣಕ್ಕೆ ರಾಹುಲ್ ಗಾಂಧಿ, ಮುಖರ್ಜಿ ಬಗ್ಗೆ ಅಸಮಾಧಾನವನ್ನು ಹೊಂದಿದ್ದು ಅವರ ಹೆಸರನ್ನು ಆಹ್ವಾನಿತರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಭೋಜನಕೂಟದಲ್ಲಿ ಇಬ್ಬರು ನಾಯಕರ ಮಧ್ಯೆ ಯಾವುದೇ ರೀತಿಯ ವೈಮನಸ್ಸು ಇರುವುದು ಕಂಡುಬಂದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ ಕಾಂಗ್ರೆಸ್‌ನ ಹಲವು ಗಣ್ಯರು ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು. ಜೊತೆಗೆ ಸಂಯುಕ್ತ ಜನತಾದಳದ ಬಂಡಾಯ ನಾಯಕ ಶರದ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಜಾತ್ಯತೀತ ಜನತಾದಳದ ದಾನಿಶ್ ಅಲಿ, ತೃಣಮೂಲ ಕಾಂಗ್ರೆಸ್‌ನ ದಿನೇಶ್ ತ್ರಿವೇದಿ, ಬಿಎಸ್‌ಪಿಯ ಸತೀಶ್‌ಚಂದ್ರ ಮಿಶ್ರಾ, ಎನ್‌ಸಿಪಿಯ ಡಿ.ಪಿ ತ್ರಿಪಾಠಿ, ಡಿಎಂಕೆಯ ಕನಿಮೊಳಿ, ಆರ್‌ಜೆಡಿಯ ಮನೋಜ್ ಝಾ, ಜಾರ್ಖಂಡ್ ಮುಕ್ತಿ ಮೋರ್ಚಾದ ಹೇಮಂತ್ ಸೊರೆನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News