ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವರು

Update: 2018-06-13 18:48 GMT

ಮಾನ್ಯರೇ,

ರಾಜ್ಯ ರಸ್ತೆ ಸಾರಿಗೆ ಇಲಾಖೆಯು ವಾಹನ ಸವಾರರ ಸುಗಮ ಸಂಚಾರಕ್ಕಾಗಿ ಹಲವಾರು ನೀತಿ ನಿಯಮಗಳನ್ನು ಜಾರಿಗೆ ತಂದಿದ್ದರೂ, ಹೆಚ್ಚಿನ ವಾಹನ ಸವಾರರು ಆ ನಿಯಮಗಳನ್ನು ಉಲ್ಲಂಘನೆ ಮಾಡಿ ಸರಕಾರಕ್ಕೆ ಮತ್ತು ಸಂಚಾರ ವ್ಯವಸ್ಥೆಗೆ ತಲೆನೋವು ತರುವಂತಹ ಕೆಲಸ ಮಾಡುತ್ತಿರುವುದು ಖಂಡನೀಯ.

ಬೆಂಗಳೂರು ಸೇರಿದಂತೆ ಹಲವಾರು ನಗರಗಳಲ್ಲಿ ಇಂತಹ ರೂಲ್ಸ್ ಬ್ರೇಕ್ ಮಾಡುತ್ತಿರುವುದನ್ನು ಕಾಣಬಹುದು. ಬೆಂಗಳೂರಿನಲ್ಲಿ ಜಯನಗರ, ಕಬ್ಬನ್ ಪಾರ್ಕ್, ಹಲಸೂರು, ಟ್ರಿನಿಟಿ, ಬೈಯಪ್ಪನಹಳ್ಳಿ ಸೇರಿದಂತೆ ಹಲವಾರು ನಗರಗಳಲ್ಲಿ ವಾಹನ ಸವಾರರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗಳನ್ನು ಹಾಕಿದ್ದರೂ, ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಅದರಲ್ಲೂ ಕೆಲವು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವುದನ್ನು ಬಿಟ್ಟು ಸಾರ್ವಜನಿಕರು ನಡೆದಾಡಲು ಮಾಡಿದ ಫುಟ್‌ಪಾತಿನ ಮೇಲೆ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಫುಟ್‌ಪಾತಿನ ಮೇಲೆ ಓಡಾಡುವ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಅಷ್ಟೇ ಅಲ್ಲದೆ ಇಂತಹ ಕೆಲವು ದ್ವಿಚಕ್ರ ವಾಹನ ಸವಾರರು ಆ್ಯಂಬುಲೆನ್ಸ್ ಹೋಗುವುದಕ್ಕೆ ಸ್ಥಳಾವಕಾಶ ನೀಡುವುದಿಲ್ಲ ಹಾಗೂ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ ಧೂಮಪಾನವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಹಲವಾರು ಬಾರಿ ಎಚ್ಚರಿಕೆ ನೀಡುತ್ತಿದ್ದರೂ ಪುನಃ ಅದೇ ಕಾರ್ಯದಲ್ಲಿ ನಿರತರಾಗಿದ್ದಾರೆ.

ಆದ್ದರಿಂದ ಪದೇ ಪದೇ ಸರಕಾರದ ನಿಯಮಗಳನ್ನು ಈ ರೀತಿ ಉಲ್ಲಂಘನೆ ಮಾಡುವಂತಹವರಿಗೆ ಸಂಬಂಧಿತ ಇಲಾಖೆ ಕಠಿಣವಾದಂತಹ ಕ್ರಮ ಕೈಗೊಳ್ಳಲು ಮುಂದಾಗಬೇಕಾಗಿದೆ.

Writer - -ರಾಮು ಎಲ್.ಪಿ., ಲಕ್ಕವಳ್ಳಿ

contributor

Editor - -ರಾಮು ಎಲ್.ಪಿ., ಲಕ್ಕವಳ್ಳಿ

contributor

Similar News