ವಾಹನ ವಿಮೆ ಖರೀದಿ ವೇಳೆ ಸಾವಿರಾರು ರೂ.ಗಳನ್ನು ಉಳಿಸಲು ಮಾರ್ಗವಿಲ್ಲಿದೆ

Update: 2018-06-14 13:14 GMT

ವಿಮಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾಗಿವೆ ಮತ್ತು ಜನರಿಂದು ತಮಗೆ ಅಗತ್ಯವಾಗಿರುವ ವಿಮೆ ರಕ್ಷಣೆಯನ್ನು ಪಡೆಯುವುದು ಸುಲಭವಾಗಿದೆ. ಆದರೆ ಕಾರಿಗೆ ವಿಮೆ ರಕ್ಷಣೆಗೆ ಸಂಬಂಧಿಸಿದಂತೆ ಹೇಳುವುದಾದರೆ ಅದನ್ನು ಖರೀದಿಸುವುದಕ್ಕಿಂತ ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಕಾರು ಖರೀದಿದಾರರು ಡೀಲರ್‌ನಿಂದಲೇ ವಾಹನ ವಿಮೆ ಪಾಲಿಸಿಯನ್ನು ಖರೀದಿಸುತ್ತಾರೆ. ಡೀಲರ್ ಬಳಿ ವಿಮೆ ಮಾಡಿಸುವುದು ಸುಲಭ ಎನ್ನುವ ಭಾವನೆ ಇದಕ್ಕೆ ಕಾರಣವಾಗಿದೆ. ಇದು ನಿಜವಿರಬಹುದಾದರೂ ಆನ್‌ಲೈನ್‌ನಲ್ಲಿ ಪಾಲಿಸಿ ಖರೀದಿಗೆ ಹೋಲಿಸಿದರೆ ಡೀಲರ್ ಬಳಿ ಪಾಲಿಸಿಯನ್ನು ಖರೀದಿಸಿ ತಾವು ಐದರಿಂದ ಎಂಟು ಸಾವಿರ ರೂ.ವರೆಗೆ ಹೆಚ್ಚು ಪಾವತಿಸುತ್ತಿದ್ದೇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತೇ ಇರುವುದಿಲ್ಲ.

ಹೀಗಾಗಿ ಹೊಸ ಕಾರು ಖರೀದಿಸುವಾಗ ಈ ಕೆಳಗಿನ ಅಂಶಗಳನ್ನು ನೀವು ಖಂಡಿತವಾಗಿ ಪರಿಗಣಿಸಬೇಕಾಗುತ್ತದೆ.

ವೆಚ್ಚದ ಹೋಲಿಕೆ

ಉದಾಹರಣೆಗೆ ನೀವು 1.6 ಲೀ.ಇಂಜಿನ್‌ನ ಮಧ್ಯಮ ಗಾತ್ರದ ಸೆಡಾನ್ ಖರೀದಿಸಿದರೆ ಡೀಲರ್ ವಿಮೆ ವೆಚ್ಚವಾಗಿ ನಿಮ್ಮಿಂದ ಸುಮಾರು 35,000 ರೂ.ಗಳನ್ನು ಪಡೆದುಕೊಳ್ಳುತ್ತಾನೆ. ನೀವು ಆನ್‌ಲೈನ್‌ನಲ್ಲಿ ಹುಡುಕಾಡಿದರೆ ಇಂತಹ ವಾಹನಕ್ಕೆ ವಿಮೆಯ ಶುಲ್ಕ 26,000 ರೂ.ಗಳಿರುವುದನ್ನು ಕಾಣಬಹುದು. ಸ್ಟಾಂಡರ್ಡ್ 2.2ಲೀ.ನ ಎಸ್‌ಯುವಿಗಳಿಗೆ ವಿಮೆ ಶುಲ್ಕವಾಗಿ ಡೀಲರ್ ನಿಮ್ಮಿಂದ 70,000 ರೂ.ವರೆಗೆ ವಸೂಲು ಮಾಡುತ್ತಾನೆ. ಆದರೆ ಇಂತಹ ವಾಹನಕ್ಕೆ ಆನ್‌ಲೈನ್‌ನಲ್ಲಿ ವಿಮೆಯನ್ನು ಖರೀದಿಸಲು 45,000 ರೂ.ಗಿಂತ ಹೆಚ್ಚು ವೆಚ್ಚ ಮಾಡಬೇಕಿಲ್ಲ.

ಕೆಲವು ಡೀಲರ್‌ಗಳು ನೀವು ಖರೀದಿಸುವ ಕಾರಿಗೆ ತಮ್ಮಲ್ಲೇ ವಿಮ ಮಾಡಿಸುವಂತೆ ಗಂಟು ಬೀಳುತ್ತಾರೆ. ಬೇರೆ ಕಡೆ ವಿಮೆ ಮಾಡಿಸಿದರೆ ನಗದುರಹಿತ ಕ್ಲೇಮ್ ಸೌಲಭ್ಯವನ್ನು ಅಥವಾ ವಾರಂಟಿಯ ಕೆಲವು ಅಂಶಗಳನ್ನು ಕಳೆದುಕೊಳ್ಳುತ್ತೀರಿ ಅಥವಾ ಕಾರು ಖರೀದಿಯ ಇಡೀ ಪ್ಯಾಕೇಜ್‌ನಲ್ಲಿ ವಿಮೆ ಉಚಿತವಾಗಿದೆ ಎಂದು ಅವರು ನಿಮಗೆ ಹೇಳಬಹುದು.

 ವಾಸ್ತವ ವಿಷಯ ಹಾಗಿಲ್ಲ. ಈ ಸಂಬಂಧ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ)ವು ವ್ಯಾಪಕ ನಿಯಮಗಳನ್ನು ರೂಪಿಸಿದೆ. ನಿಮ್ಮ ಕಾರ್ ಡೀಲರ್ ವಿಮಾ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿರುವವರೆಗೆ ಆತ ನಿಮಗೆ ನಗದು ರಹಿತ ಸೌಲಭ್ಯವನ್ನು ನಿರಾಕರಿಸುವಂತಿಲ್ಲ. ಅಲ್ಲದೆ ವಾರಂಟಿಯನ್ನು ಕಾರು ತಯಾರಿಕೆ ಕಂಪನಿಯು ನೀಡಿರುವುದರಿಂದ ನೀವು ಬೇರೆ ಕಡೆ ವಿಮಾ ಪಾಲಿಸಿಯನ್ನು ಖರೀದಿಸಿದರೆ ವಾರಂಟಿಯ ವ್ಯಾಪ್ತಿಯಲ್ಲಿ ಯಾವುದು ಬರುತ್ತದೆ ಎನ್ನುವುದನ್ನು ನಿರ್ಧರಿಸುವಲ್ಲಿ ಆತನ ಪಾತ್ರವೇನೂ ಇಲ್ಲ ಎನ್ನುವುದು ನಿಮಗೆ ತಿಳಿದಿರಲಿ.

ಅತಿಯಾದ ಪೂರಕಗಳು

  ಬಳಕೆಯ ಮಾದರಿ ಅಥವಾ ಅಗತ್ಯವಿದೆಯೇ ಎನ್ನುವುದನ್ನು ಪರಿಗಣಿಸದೆ ಪೂರಕ ಸೇವೆಗಳ ಪೂರ್ವ ನಿರ್ಧರಿತ ಪ್ಯಾಕೇಜ್‌ನ್ನು ಗ್ರಾಹಕರಿಗೆ ನೀಡುತ್ತಿರುವುದು ಕಂಡುಬರುತ್ತಿದೆ. ಉದಾಹರಣೆಗೆ ನೀವು ತಗ್ಗು ಪ್ರದೇಶ ಅಥವಾ ನೆರೆ ನೀರು ನಿಲ್ಲುವ ಪ್ರದೇಶದ ನಿವಾಸಿಯಲ್ಲದಿದ್ದರೆ ಇಂಜಿನ್ ಪ್ರೊಟೆಕ್ಟರ್ ನಿಮಗೆ ಅಗತ್ಯವಿಲ್ಲದಿರಬಹುದು. ಇದೇ ರೀತಿ ನೀವು ಸಣ್ಣಕಾರನ್ನು ಖರೀದಿಸಿದಾಗ ಕನ್ಸೂಮೇಬಲ್ ಕವರ್/ಕೀ ಮತ್ತು ಲಾಕ್‌ಗಳ ಬದಲಾವಣೆಗೆ ನೀವು ಕಟ್ಟಬೇಕಾದ ಪ್ರೀಮಿಯಂ ಹೆಚ್ಚಿದ್ದರೆ ಅದನ್ನು ಪಡೆಯಬೇಕೇ ಎನ್ನುವುದು ನಿಮ್ಮ ಆಯ್ಕೆಯಾಗುತ್ತದೆ.

ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರೇ ಕಾರು ಚಲಾಯಿಸುತ್ತಿದ್ದರೆ ಪೇಡ್ ಡ್ರೈವರ್ ಲೀಗಲ್ ಲಾಯಬಿಲಿಟಿ ಕವರ್ ಅನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ನೀವು ಕಾರಿಗೆ ಚಾಲಕನನ್ನು ನೇಮಿಸಿಕೊಂಡಿದ್ದರೆ ಮಾತ್ರ ಇದು ಅಗತ್ಯವಾಗುತ್ತದೆ ಎನ್ನುವುದು ನೆನಪಿರಲಿ. ನೀವು/ನಿಮ್ಮ ಕುಟುಂಬ ಸದಸ್ಯರು ಸಾಕಷ್ಟು ವೈಯಕ್ತಿಕ ಅಪಘಾತ ವಿಮೆ ಅಥವಾ ಅಪಘಾತ ವಿಮೆಯೊಂದಿಗಿನ ಜೀವವಿಮೆ ಪಾಲಿಸಿಗಳನ್ನು ಹೊಂದಿದ್ದರೆ ಅನ್‌ನೇಮ್ಡ್ ಪ್ಯಾಸೆಂಜರ್ ಕವರ್ ಪಡೆಯುವ ಬಗ್ಗೆ ನೀವು ಪುನರ್‌ಪರಿಶೀಲನೆ ನಡೆಸುವುದು ಅಗತ್ಯವಾಗುತ್ತದೆ.

ನೋ ಕ್ಲೇಮ್ ಬೋನಸ್

ಇದು ನೀವು ನಿಮ್ಮ ಕಾರು ಡೀಲರ್‌ನಿಂದ ವಿಮೆಯನ್ನು ಖರೀದಿಸುವಾಗ ಖಂಡಿತವಾಗಿ ಪರಿಶೀಲಿಸಲೇಬೇಕಾದ ಮಹತ್ವದ ಅಂಶವಾಗಿದೆ. ನೋ ಕ್ಲೇಮ್ ಬೋನಸ್ ಎನ್ನುವುದು ನೀವು ಹಿಂದಿನ ಪಾಲಿಸಿಯ ಅವಧಿಯಲ್ಲಿ ಯಾವುದೇ ಹಣವನ್ನು ವಿಮಾ ಕಂಪನಿಯಿಂದ ಪಡೆದಿರದಿದ್ದರೆ ಕಂಪನಿಯು ನೀವು ಕಟ್ಟುವ ವಿಮೆ ಪ್ರೀಮಿಯಂ ಮೇಲೆ ನೀಡುವ ಡಿಸ್ಕೌಂಟ್ ಅಥವಾ ರಿಯಾಯಿತಿಯಾಗಿದೆ ಮತ್ತು ಇದು ಐದು ವರ್ಷಗಳವರೆಗೆ ನೀವು ಕಂಪನಿಯಿಂದ ಯಾವುದೇ ಮೊತ್ತ ಕ್ಲೇಮ್ ಮಾಡಿರದಿದ್ದರೆ ಈ ರಿಯಾಯಿತಿಯು ಶೇ.50ರಷ್ಟು ಆಗಬಹುದು.

ಕೆಲವು ಡೀಲರ್‌ಗಳು ವಿಮೆ ಪಾಲಿಸಿಯನ್ನು ಮಾರುವಾಗ ನವೀಕರಣಗಳ ಸಂದರ್ಭ ಪ್ರೀಮಿಯಂ ಮೇಲೆ ರಿಯಾಯಿತಿ ನೀಡುವುದಾಗಿ ನಿಮಗೆ ಭರವಸೆ ನೀಡಬಹುದು. ನೀವು ಎಲ್ಲಿಂದಲೇ ವಿಮೆ ಪಾಲಿಸಿಯನ್ನು ಖರೀದಿಸಿರಲಿ,ನೋ ಕ್ಲೇಮ್ ಬೋನಸ್ ಪಡೆಯುವ ಹಕ್ಕು ನಿಮಗೆ ಇರುತ್ತದೆ ಮತ್ತು ಇದಕ್ಕೂ ನಿಮ್ಮ ಕಾರ್ ಡೀಲರ್‌ಗೂ ಯಾವುದೇ ಸಂಬಂಧವಿರುವುದಿಲ್ಲ. ನೀವು ಎಲ್ಲಿಯವರೆಗೆ ಕ್ಲೇಮ್‌ಗಳನ್ನು ಪಡೆದಿರುವುದಿಲ್ಲವೋ ಅಲ್ಲಿಯವರೆಗೆ ನೀವು ನಂತರದ ವರ್ಷಗಳಲ್ಲಿ ನಿಮ್ಮ ವಿಮೆ ಕಂಪನಿಯನ್ನು ಬದಲಿಸಿದರೂ ನೋ ಕ್ಲೇಮ್ ಬೋನಸ್‌ಗೆ ನೀವು ಅರ್ಹರಾಗಿರುತ್ತಿರಿ.

ಡೀಲರ್ ಬಳಿಯೇ ಕಾರು ಖರೀದಿ ನಿಮಗಿರಬಹುದಾದ ಏಕೈಕ ಆಯ್ಕೆಯಾಗಿರಬಹುದು,ಆದರೆ ವಾಹನ ವಿಮೆಯ ವಿಷಯದಲ್ಲಿ ಹೀಗಿಲ್ಲ. ನೀವು ವಾಹನ ವಿಮೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಅದು ಯಾವ ಅಂಶಗಳನ್ನು ಒಳಗೊಂಡಿರಬೇಕು,ಅದು ಎಷ್ಟು ವಿಮಾ ರಕ್ಷಣೆಯನ್ನು ನೀಡಬೇಕು ಮತ್ತು ತಗಲುವ ಪ್ರೀಮಿಯಂ ಇತ್ಯಾದಿಗಳ ಬಗ್ಗೆ ತಿಳಿದುಕೊಂಡಿದ್ದರೆ ನೀವು ವಿಮೆಯನ್ನು ಖರೀದಿಸುವಾಗ ಕಂಪನಿಯನ್ನು ಸರಿಯಾಗಿ ಪ್ರಶ್ನಿಸಬಹುದು. ಇದರಿಂದ ನೀವು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವಿಮೆಯನ್ನು ಪಡೆದುಕೊಳ್ಳಲು ಸಾಧ್ಯವಾಗಬಹುದು.

ಆದರೆ ಕಾರನ್ನು ವಶಕ್ಕೆ ಪಡೆದುಕೊಳ್ಳದೆ ವಿಮೆಯನ್ನು ಖರೀದಿಸುವುದು ಹೇಗೆ? ಇದು ಸರಳವಾದ ಪ್ರಕ್ರಿಯೆಯಾಗಿದೆ. ನಿಮ್ಮ ಡೀಲರ್ ಬಳಿ ನೀವು ಖರೀದಿಸುತ್ತಿರುವ ಕಾರಿನ ಇಂಜಿನ್ ಮತ್ತು ಚಾಸಿಸ್ ನಂಬರ್‌ಗಳನ್ನು ಪಡೆದುಕೊಳ್ಳಿ ಮತ್ತು ಯಾವ ವ್ಯಾಪ್ತಿಯ ಆರ್‌ಟಿಒ ಬಳಿ ಅದನ್ನು ನೋಂದಣಿ ಮಾಡಿಸಲಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಕಾರಿಗೆ ಅಗತ್ಯವಾಗಿರುವ ವಿಮೆಯನ್ನು ಖರೀದಿಸಲು ಇಷ್ಟು ವಿವರಗಳು ಸಾಕು. ವಿಮೆ ಮಾಡಿಸುವ ಕಾರ್ಯ ಪೂರ್ಣಗೊಂಡ ಬಳಿಕ ಪಾಲಿಸಿಯ ವಿವರಗಳನ್ನು ಡೀಲರ್‌ಗೆ ನೀಡಿ ಕಾರಿನ ನೋಂದಣಿಯನ್ನು ಮಾಡಿಸಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News