×
Ad

ರೈಲಿನಲ್ಲಿ ಮಗಳನ್ನು ಮರೆತು ಬಿಟ್ಟ ತಂದೆ, ಕರ್ತವ್ಯಪ್ರಜ್ಞೆ ಮೆರೆದ ಆರ್‌ಪಿಎಫ್

Update: 2018-06-15 11:54 IST

ಮುಂಬೈ, ಜೂ.15: ಸಾಯಿನಗರ್(ಶಿರ್ಡಿ)ನಿಂದ ದಾದರ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ 30ರ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ಆರರ ಹರೆಯದ ಮಗಳನ್ನು ರೈಲಿನಲ್ಲೇ ಮರೆತು ಬಿಟ್ಟು ತಾನು ಇಳಿಯಬೇಕಾದ ರೈಲ್ವೆ ಸ್ಟೇಶನ್‌ನಲ್ಲಿ ಇಳಿದಿರುವ ಘಟನೆ ನಡೆದಿದೆ. ರೈಲಿನೊಳಗೆ ನಿದ್ರಿಸುತ್ತಿದ್ದ ಆರರ ಬಾಲಕಿಯನ್ನು ರೈಲ್ವೆ ಸುರಕ್ಷಾ ಪಡೆ(ಆರ್‌ಪಿಎಫ್) ರಕ್ಷಣೆ ಮಾಡಿ ಕರ್ತವ್ಯಪ್ರಜ್ಞೆ ಮೆರೆದಿದೆ.

ದಾದರ್ ಸ್ಟೇಶನ್‌ಗೆ ಬಂದ ಎಕ್ಸ್‌ಪ್ರೆಸ್ ರೈಲನ್ನು ಹುಡುಕಾಡಿದ ಆರ್‌ಪಿಎಫ್ ಅಧಿಕಾರಿಗಳು ಸ್ಲೀಪರ್ ಕೋಚ್‌ನಲ್ಲಿ ಬಾಲಕಿಯೊಬ್ಬಳು ಮಲಗಿರುವುದನ್ನು ಪತ್ತೆ ಹಚ್ಚಿದರು.

ಗುರುವಾರ ಬೆಳಗ್ಗೆ ಕಲ್ಯಾಣ್ ಸ್ಟೇಶನ್ ಮ್ಯಾನೇಜರ್ ಒಬ್ಬರು ನಮಗೆ ಕರೆ ಮಾಡಿದ್ದರು. ಪ್ರಯಾಣಿಕರೊಬ್ಬರು ತಮ್ಮ ಮಗಳು ರೈಲಿನಲ್ಲಿ ಉಳಿದಿರುವುದಾಗಿ ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಡೊಂಬಿವಲಿ ನಿವಾಸಿ ಓಂಪ್ರಕಾಶ್ ಯಾದವ್ ಎಂಬಾತ ಶಿರ್ಡಿಯಿಂದ ಕಲ್ಯಾಣ್‌ಗೆ ಎಸ್ 6-5 ಸೀಟಿನಲ್ಲಿ ಪ್ರಯಾಣಿಸಿದ್ದರು.ರೈಲು ಕಲ್ಯಾಣ ಸ್ಟೇಶನ್‌ಗೆ ಬಂದ ತಕ್ಷಣ ಯಾದವ್ ತನ್ನ ಪತ್ನಿ ಹಾಗೂ ಲಗೇಜ್‌ನೊಂದಿಗೆ ರೈಲಿನಿಂದ ಇಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟೇಶನ್‌ನಿಂದ ಹೊರಡಲು ತಯಾರಾಗುತ್ತಿದ್ದಾಗ ಮಗಳು ಲಿಪಿಕಾ ಜೊತೆಯಲ್ಲಿ ಇಲ್ಲದಿರುವುದು ಯಾದವ್ ಗಮನಕ್ಕೆ ಬಂದಿದೆ. ಸುತ್ತಮುತ್ತ ಹುಡುಕಾಡಿದ ಬಳಿಕ ಮಗಳು ಸ್ಲೀಪರ್ ಕೋಚ್‌ನಲ್ಲಿ ಬಾಕಿಯಾಗಿರುವ ವಿಚಾರ ಗೊತ್ತಾಗಿದೆ.

‘‘ಯಾದವ್ ನಮ್ಮನ್ನು ಸಂಪರ್ಕಿಸಿದರು. ನಾವು ಯಾದವ್ ಪ್ರಯಾಣಿಸುತ್ತಿದ್ದ ಕೋಚ್‌ನ್ನು ಹುಡುಕಾಡಿದಾಗ ಲಿಪಿಕಾ ಸೀಟಿನಲ್ಲಿ ಕುಳಿತು ನಿದ್ರಿಸುತ್ತಿರುವುದು ಗೊತ್ತಾಯಿತು ಎಂದು ದಾದರ್‌ನ ಆರ್‌ಪಿಎಫ್ ತಿಳಿಸಿದೆ.

ದಾದರ್ ಸ್ಟೇಶನ್‌ಗೆ ಧಾವಿಸಿದ ಬಂದ ಯಾದವ್‌ಗೆ ಆರ್‌ಪಿಎಫ್ ಅಧಿಕಾರಿಗಳು ಬಾಲಕಿಯನ್ನು ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News