×
Ad

ರಜಪೂತರ ಸಾಂಪ್ರದಾಯಿಕ ಬೂಟು `ಮೊಜ್ಡಿ' ಧರಿಸಿದ್ದ ದಲಿತ ಬಾಲಕನ ಮೇಲೆ ಬರ್ಬರ ಹಲ್ಲೆ

Update: 2018-06-15 12:18 IST

ಅಹ್ಮದಾಬಾದ್, ಜೂ.15: ಸಾಂಪ್ರದಾಯಿಕ ಚರ್ಮದ ಶೂ `ಮೊಜ್ಡಿ' ಧರಿಸಿದ್ದ 13 ವರ್ಷದ ದಲಿತ ಬಾಲಕನ ಮೇಲೆ ನಾಲ್ಕು ಮಂದಿ ರಜಪೂತ ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಗುರುವಾರ ಗುಜರಾತ್ ರಾಜ್ಯದ ಮೆಹ್ಸಾನ ಜಿಲ್ಲೆಯ ಬಹುಚರಜಿ ಪಟ್ಟಣದಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಕ ನೀಡಿದ ದೂರಿನ ಆಧಾರದಲ್ಲಿ ನಾಲ್ಕು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆರೋಪಿಗಳಲ್ಲೊಬ್ಬನನ್ನು  ಭರತಸಿಂಹ್ ದರ್ಬಾರ್ ಎಂದು ಗುರುತಿಸಲಾಗಿದೆ.
ಸಂತ್ರಸ್ತ ಬಾಲಕ ಅಹ್ಮದಾಬಾದ್ ಜಿಲ್ಲೆಯ ವಿಠಲಪುರ ಗ್ರಾಮದವನಾಗಿದ್ದಾನೆ. ಬಸ್ಸು ನಿಲ್ದಾಣದ ಸಮೀಪ ಕುಳಿತಿದ್ದ ಆತನ ಬಳಿ ಬಂದ ಯುವಕರ ಗುಂಪು ಆತನ ಜಾತಿಯೇನೆಂದು ಕೇಳಿತ್ತು. ಆತ ತಾನೊಬ್ಬ  ದಲಿತನೆಂದು ತಿಳಿಸಿದಾಗ ಹಾಗಿದ್ದರೆ ಮೊಜ್ಡಿ ಏಕೆ ಧರಿಸಿದ್ದೀಯಾ ಎಂದು ಪ್ರಶ್ನಿಸಿ ಆತನ ಮೇಲೆ ಹಲ್ಲೆಗೆ ಮುಂದಾದಾಗ ಬಾಲಕ ತಾನೊಬ್ಬ ರಜಪೂತ ಎಂದು ಹೇಳಿ ಬಚಾವಾಗಲು ಯತ್ನಿಸಿದರೂ ಗುಂಪು ಆತನನ್ನು ಬಲವಂತವಾಗಿ ಬೇರೊಂದು ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿತ್ತು.
``ಅವರು ನನಗೆ ಗುದ್ದಿದ ನಂತರ ಬೆತ್ತದಿಂದ ಹೊಡೆದರು, ಈ ಶೂ ಧರಿಸಿ ನಾನು ರಜಪೂತನಾಗಲು ಯತ್ನಿಸುತ್ತಿನೆಂದು ಆರೋಪಿಸಿದರು, ಅವರ ಕೈಯ್ಯಿಂದ ಹೇಗಾದರೂ ತಪ್ಪಿಸಿ ಮನೆಗೆ ಹಿಂದಿರುಗಿದೆ'' ಎಂದು ಬಾಲಕ ತನ್ನ ದೂರಿನಲ್ಲಿ ತಿಳಿಸಿದ್ದಾನೆ.
ವೀಡಿಯೋದಲ್ಲಿ ಬಾಲಕ ಅಳುತ್ತಾ ತನ್ನನ್ನು ಬಿಟ್ಟುಬಿಡುವಂತೆ ಮನವಿ ಮಾಡುತ್ತಿರುವುದು ಕೇಳಿಸುತ್ತಿದೆ. ಆರೋಪಿಯೊಬ್ಬ ಇಂತಹ ಶೂ ಧರಿಸಿದ ಮಾತ್ರಕ್ಕೆ ಯಾರೂ ರಜಪೂತರಾಗುವುದಲ್ಲ ಎಂದು ಹೇಳಿದರೆ  ಇನ್ನೊಬ್ಬ ವೀಡಿಯೋವನ್ನು ಬಾಲಕನ ಗ್ರಾಮವಾದ ವಿಠಲಪುರಕ್ಕೆ ಕಳುಹಿಸಿ ಇತರರಿಗೆ ಎಚ್ಚರಿಕೆ ನೀಡುವುದಾಗಿ ಹೇಳುತ್ತಿರುವುದು ಕೇಳಿಸುತ್ತಿದೆ.
ಕಳೆದ ತಿಂಗಳು ಅಹ್ಮದಾಬಾದ್‍ನ ಧೊಲ್ಕಾ ಪಟ್ಟಣದಲ್ಲಿ ನಡೆದ ಇಂತಹುದೇ ಘಟನೆಯೊಂದರಲ್ಲಿ ತನ್ನ ಹೆಸರಿಗೆ ಸಿನ್ಹ್ ಉಪನಾಮೆ ಸೇರಿಸಿದ್ದಾನೆಂದು ದಲಿತ ಯುವಕನೊಬ್ಬನ ಮೇಲೆ ರಜಪೂತರ ಗುಂಪು ಹಲ್ಲೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News