ಮಲಾಲಾಗೆ ಗುಂಡಿಕ್ಕಿದ್ದ ‘ರೇಡಿಯೊ ಮುಲ್ಲಾ’ ಅಮೆರಿಕದ ಡ್ರೋನ್ ದಾಳಿಗೆ ಬಲಿ
ಹೊಸದಿಲ್ಲಿ,ಜೂ.15: ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮಲಾಲಾ ಯೂಸುಫ್‌ಝಾಯಿ ಅವರಿಗೆ ಗುಂಡಿಕ್ಕಿದ್ದ ವ್ಯಕ್ತಿ ಎನ್ನಲಾಗಿರುವ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನದ ಮುಖ್ಯಸ್ಥ ಫಝ್ಲುಲ್ಲಾ(44) ಅಮೆರಿಕದ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟಿರುವುದಾಗಿ ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಅಮೆರಿಕದ ಮಿಲಿಟರಿ ಅಧಿಕಾರಿಯೋರ್ವರು ವಾಯ್ಸಿ ಆಫ್ ಅಮೆರಿಕಾ(ವಿಒಐ)ಕ್ಕೆ ಇಂದು ಖಚಿತಪಡಿಸಿದ್ದಾರೆ. ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ನಕಲಿ ರೇಡಿಯೋದಲ್ಲಿ ತನ್ನ ಸುದೀರ್ಘ ಮತ್ತು ತೀಕ್ಷ್ಣ ಭಾಷಣಗಳಿಂದಾಗಿ ಫಝ್ಲ್ಲುಲ್ಲಾ ‘ಮುಲ್ಲಾ ರೇಡಿಯೊ’ಎಂದೂ ಹೆಸರಾಗಿದ್ದ.
ಅಮೆರಿಕದ ಪಡೆಗಳು ಬುಧವಾರ ರಾತ್ರಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಗಡಿಗೆ ಸಮೀಪದಲ್ಲಿರುವ ಕುನಾರ್ ಪ್ರಾಂತದಲ್ಲಿ ಹಿರಿಯ ತಾಲಿಬಾನ್ ನಾಯಕನನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿದ್ದವು ಎಂದು ಅಫಘಾನಿಸ್ತಾನದಲ್ಲಿರುವ ಅಮೆರಿಕ ಪಡೆಗಳ ವಕ್ತಾರ ಮಾರ್ಟಿನ್ ಒ’ಡೊನೆಲ್ ಅವರು ಗುರುವಾರ ವಿಒಎಕ್ಕೆ ತಿಳಿಸಿದ್ದರು. ಅವರು ಫಝ್ಲುಲ್ಲಾನ ಹೆಸರನ್ನು ನಿರ್ದಿಷ್ಟವಾಗಿ ಹೇಳಿರಲಿಲ್ಲ.
ಅಮೆರಿಕ ಫಜ್ಲುಲ್ಲಾನನ್ನು ಕೊಂದಿರುವುದಾಗಿ ವರದಿಯಾಗಿರುವುದು ಇದು ಮೊದಲ ಬಾರಿಯೇನಲ್ಲ. 2010ರಿಂದಲೂ ಈ ಭಯೋತ್ಪಾದಕ ಕೊಲ್ಲಲ್ಪಟ್ಟಿದ್ದಾನೆಂದು ಕನಿಷ್ಠ ನಾಲ್ಕು ಬಾರಿ ವರದಿಯಾಗಿತ್ತು.
ಮುಲ್ಲಾ ರೇಡಿಯೋ ಅಥವಾ ರೇಡಿಯೊ ಮುಲ್ಲಾ ಅಥವಾ ಮೌಲಾನಾ ರೇಡಿಯೋ ಎಂದು ಕರೆಯಲಾಗುವ ಫಝ್ಲುಲ್ಲಾ 2012ರಲ್ಲಿ ಆಗ 15ರ ಹರೆಯದವರಾಗಿದ್ದ ಮಲಾಲಾರ ಕೊಲೆಗೆ ಆದೇಶಿಸಿದ್ದ ಎಂದು ಅಮೆರಿಕವು ಹೇಳಿದೆ. ಮಲಾಲಾರ ಶಾಲಾಬಸ್‌ನೊಳಗೆ ಪ್ರವೇಶಿಸಿದ್ದ ಫಜ್ಲುಲ್ಲಾ ಅವರ ತಲೆಗೆ ಗುಂಡಿಕ್ಕಿದ್ದ. ತೀವ್ರವಾಗಿ ಗಾಯಗೊಂಡಿದ್ದ ಅವರು ಪವಾಡಸದೃಶವಾಗಿ ಬದುಕುಳಿದಿದ್ದರು.
2014ರಲ್ಲಿ ಪೇಷಾವರದಲ್ಲಿನ ಆರ್ಮಿ ಪಬ್ಲಿಕ್ ಸ್ಕೂಲ್ ಮೇಲೆ ನಡೆದಿದ್ದ ದಾಳಿಗೂ ಫಝ್ಲುಲ್ಲಾ ಆದೇಶಿಸಿದ್ದ ಎನ್ನಲಾಗಿದೆ. ಆ ದಾಳಿಯಲ್ಲಿ 130 ಮಕ್ಕಳು ಸೇರಿದಂತೆ 151 ಜನರು ಕೊಲ್ಲಲ್ಪಟ್ಟಿದ್ದರು. 2013ರಲ್ಲಿ ಆತ ಪಾಕಿಸ್ತಾನ ತಾಲಿಬಾನ್‌ನ ಮುಖ್ಯಸ್ಥನಾಗಿ ನೇಮಕಗೊಂಡಿದ್ದ.
ಅಮೆರಿಕವು ಕಳೆದ ಮಾರ್ಚ್‌ನಲ್ಲಿ ಫಝ್ಲುಲ್ಲಾನ ತಲೆಯ ಮೇಲೆ ಐದು ಮಿಲಿಯನ್ ಡಾ. ಬಹುಮಾನವನ್ನು ಘೋಷಿಸಿತ್ತು. ಅದೇ ತಿಂಗಳು ಅಮೆರಿಕದ ಡ್ರೋನ್ ದಾಳಿಯಲ್ಲಿ ಫಜ್ಲುಲ್ಲಾನ ಪುತ್ರ ಅಬ್ದುಲ್ಲಾ ಕೊಲ್ಲಲ್ಪಟ್ಟಿದ್ದ.