ಏಕೈಕ ಟೆಸ್ಟ್: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2018-06-15 12:46 GMT

  ಬೆಂಗಳೂರು, ಜೂ.15: ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಇಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 262 ರನ್‌ಗಳಿಂದ ಗೆದ್ದುಕೊಂಡಿದೆ.

 ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡನೇ ದಿನದಾಟವಾದ ಶುಕ್ರವಾರ ಭಾರತದ 474 ರನ್‌ಗೆ ಉತ್ತರಿಸಹೊರಟ ಅಫ್ಘಾನಿಸ್ತಾನ ತಂಡ ಭಾರತದ ಸ್ಪಿನ್ನರ್ ಆರ್.ಅಶ್ವಿನ್(4-27) ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 109 ರನ್‌ಗೆ ಆಲೌಟಾಯಿತು. ಅಶ್ವಿನ್‌ಗೆ ರವೀಂದ್ರ ಜಡೇಜ(2-18) ಹಾಗೂ ಇಶಾಂತ್ ಶರ್ಮ(2-28) ತಲಾ ವಿಕೆಟ್ ಕಬಳಿಸುವುದರೊಂದಿಗೆ ಸಾಥ್ ನೀಡಿದ್ದಾರೆ.

ಅಫ್ಘಾನಿಸ್ತಾನದ ಪರ ಮುಹಮ್ಮದ್ ನಬಿ(24) ಅಗ್ರ ಸ್ಕೋರರ್ ಎನಿಸಿಕೊಂಡರು. ಮುಜೀಬ್‌ವುರ್‌ರಹ್ಮಾನ್(15) ಹಾಗೂ ಶಹಝಾದ್(14) ಎರಡಂಕೆಯ ಸ್ಕೋರ್ ದಾಖಲಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಬೇಗನೆ ಆಲೌಟಾಗಿ ಫಾಲೋ-ಆನ್‌ಗೆ ಸಿಲುಕಿದ ಅಫ್ಘಾನಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ ಸ್ಪಿನ್ನರ್ ರವೀಂದ್ರ ಜಡೇಜ(4-17), ಉಮೇಶ್ ಯಾದವ್(3-26) ಹಾಗೂ ಇಶಾಂತ್ ಶರ್ಮ(2-17) ದಾಳಿಗೆ ತತ್ತರಿಸಿ ಕೇವಲ 103 ರನ್‌ಗೆ ಆಲೌಟಾಯಿತು.

ಅಫ್ಘಾನಿಸ್ತಾನದ ಪರ ಎರಡನೇ ಇನಿಂಗ್ಸ್‌ನಲ್ಲಿ ಶಾಹಿದಿ(ಔಟಾಗದೆ 36) ಅಗ್ರ ಸ್ಕೋರರ್ ಎನಿಸಿಕೊಂಡರು. ಅಸ್ಘರ ಸ್ಟಾನಿಕ್‌ಝೈ(25) ಎರಡಂಕೆಯ ಸ್ಕೋರ್ ದಾಖಲಿಸಿದರು.

ಎರಡನೇ ಇನಿಂಗ್ಸ್‌ನಲ್ಲಿ ಅಫ್ಘಾನ್ ತಂಡವನ್ನು ಮತ್ತೊಮ್ಮೆ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಭಾರತ ಇನಿಂಗ್ಸ್ ಹಾಗೂ 262 ರನ್‌ಗಳ ಅಂತರದಿಂದ ಜಯ ಸಾಧಿಸಿತು.

ಇದಕ್ಕೆ ಮೊದಲು 6 ವಿಕೆಟ್ ನಷ್ಟಕ್ಕೆ 347 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಹಾರ್ದಿಕ್ ಪಾಂಡ್ಯ(71) ಅರ್ಧಶತಕದ ಕೊಡುಗೆ ನೆರವಿನಿಂದ 474 ರನ್ ಗಳಿಸಿ ಆಲೌಟಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News