ಐಎಎಸ್ ಅಧಿಕಾರಿಗಳ ಮುಷ್ಕರದಿಂದ ದಿಲ್ಲಿಯಲ್ಲಿ ರಾಷ್ಟ್ರಪತಿ ಆಡಳಿತ: ಅರವಿಂದ್ ಕೇಜ್ರಿವಾಲ್

Update: 2018-06-16 16:34 GMT

ಹೊಸದಿಲ್ಲಿ, ಜೂ.16: ಐಎಎಸ್ ಅಧಿಕಾರಿಗಳ ಮುಷ್ಕರದ ಕಾರಣ ವಾಸ್ತವದಲ್ಲಿ ದಿಲ್ಲಿಯಲ್ಲಿ ಈಗ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಕೇಜ್ರಿವಾಲ್ ತಮ್ಮ ಮೂವರು ಸಂಪುಟ ಸಹೋದ್ಯೋಗಿಗಳೊಂದಿಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಕಚೇರಿಯ ನಿರೀಕ್ಷಣಾ ಕೊಠಡಿಯಲ್ಲಿ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ಐಎಎಸ್ ಅಧಿಕಾರಿಗಳು ತಮ್ಮ ಮುಷ್ಕರವನ್ನು ಕೈಬಿಡುವಂತೆ ಲೆ.ಗ. ಬೈಜಾಲ್ ಸೂಚಿಸಬೇಕು ಹಾಗೂ ಪಡಿತರ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುವ ಯೋಜನೆಯನ್ನು ಅಧಿಕಾರಿಗಳು ಅನುಮೋದಿಸಬೇಕೆಂದು ಆಗ್ರಹಿಸಿ ಕೇಜ್ರೀವಾಲ್ ಮತ್ತವರ ಸಹೋದ್ಯೋಗಿಗಳು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿರಿಸಿದೆ. ಐಎಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಣೆಗೆ ಅಸಮ್ಮತಿ ಸೂಚಿಸಿರುವುದು ವಾಸ್ತವಿಕವಾಗಿ ರಾಷ್ಟ್ರಪತಿ ಆಡಳಿತ

ಜಾರಿಯಲ್ಲಿದ್ದಂತೆ ಆಗುವುದಿಲ್ಲವೇ ಎಂದು ಕೆಲವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಕೇಜ್ರಿವಾಲ್ವಾಲ್, ಇದನ್ನು ನಾನು ಒಪ್ಪುತ್ತೇನೆ. ದಿಲ್ಲಿಯಲ್ಲಿ ಐಎಎಸ್ ಅಧಿಕಾರಿಗಳ ಮುಷ್ಕರದ ಮೂಲಕ ವಾಸ್ತವದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾ, ಸಚಿವರಾದ ಸತ್ಯೇಂದರ್ ಜೈನ್ ಹಾಗೂ ಗೋಪಾಲ್ ರಾಯ್‌ರೊಂದಿಗೆ ಕೇಜ್ರಿವಾಲ್ ಲೆ.ಗ. ಬೈಜಾಲ್ ಕಚೇರಿಯಲ್ಲಿ ಧರಣಿ ಮುಷ್ಕರ ನಡೆಸುತ್ತಿದ್ದಾರೆ. ಜೈನ್ ಹಾಗೂ ಸಿಸೋಡಿಯಾ ಕ್ರಮವಾಗಿ ಮಂಗಳವಾರ ಮತ್ತು ಬುಧವಾರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ತಮ್ಮನ್ನು ಇಲ್ಲಿಂದ ಬಲಾತ್ಕಾರವಾಗಿ ತೆರವುಗೊಳಿಸಲು ಪ್ರಯತ್ನಿಸಿದರೆ ನೀರು ಕೂಡಾ ಕುಡಿಯದೆ ತೀವ್ರ ಮುಷ್ಕರ ನಡೆಸುವುದಾಗಿ ಇವರಿಬ್ಬರು ಘೋಷಿಸಿದ್ದಾರೆ. ತಾನು ನಡೆಸುವ ಸಭೆಗೆ ಹಾಜರಾಗದ ದಿಲ್ಲಿ ಸರಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವಂತೆ ಈ ಹಿಂದೆ ಕೇಜ್ರೀವಾಲ್ ಪ್ರಧಾನಿ ಮೋದಿಯವನ್ನು ಒತ್ತಾಯಿಸಿದ್ದರು. ಅಲ್ಲದೆ ಐಎಎಸ್ ಅಧಿಕಾರಿಗಳು ಮುಷ್ಕರ ಕೈಬಿಟ್ಟರೆ ಮಾತ್ರ ತಾನು ರವಿವಾರ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಧಾನಿಗೆ ಪತ್ರ ಬರೆದು ತಿಳಿಸಿದ್ದರು. ಆದರೆ ಯಾವುದೇ ಅಧಿಕಾರಿಗಳೂ ಮುಷ್ಕರ ನಡೆಸುತ್ತಿಲ್ಲ ಎಂದು ಐಎಎಸ್ ಅಧಿಕಾರಿಗಳ ಸಂಘಟನೆ ಸ್ಪಷ್ಟನೆ ನೀಡಿದೆ. ಆಪ್ ಸಚಿವರು ಧರಣಿ ಮುಷ್ಕರ ಆರಂಭಿಸಿದ ದಿನದಿಂದ ಲೆ.ಗ. ಬೈಜಾಲ್ ತಮ್ಮ ನಿವಾಸದಿಂದಲೇ ಸರಕಾರಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಈ ಮಧ್ಯೆ, ಐಎಎಸ್ ಅಧಿಕಾರಿಗಳ ಅನೌಪಚಾರಿಕ ಮುಷ್ಕರವನ್ನು ಕೊನೆಗೊಳಿಸಬೇಕೆಂದು ಸೂಚಿಸುವಂತೆ ಹಾಗೂ ಮುಖ್ಯಮಂತ್ರಿ ಮತ್ತು ಸಂಪುಟದ ಸಚಿವರು ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ನಡೆಸುತ್ತಿರುವ ಧರಣಿ ಮುಷ್ಕರ ಅಸಾಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಜೂ.18ರಂದು ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News