ರೈಸಿಂಗ್ ಕಾಶ್ಮೀರ್: ಸಂಪಾದಕ ಹತ್ಯೆಯಾದರೂ ನಿಲ್ಲದ ಪತ್ರಿಕೆ

Update: 2018-06-17 16:23 GMT

"ಅದು ಪಟಾಕಿ ಸಿಡಿಸಿದ್ದಿರಬೇಕು ಎಂದು ನಾವು ಅಂದುಕೊಂಡೆವು"- ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಕಿಟಕಿ ಮೂಲಕ ಒಂದು ಕ್ಷಣ ಬೆಂಕಿ ಮಿಂಚಿ ಮಾಯವಾದ ಬಗ್ಗೆ ಸಹ ಸಂಪಾದಕ ಫೈಸುಲ್ ಯಾಸೀನ್ ಪ್ರತಿಕ್ರಿಯಿಸಿದ್ದು ಹೀಗೆ. ಆಗ ಸಮಯ ಮುಸ್ಸಂಜೆ 7.25. ಇಫ್ತಾರ್‌ಗೆ 15 ನಿಮಿಷ ಉಳಿದಿತ್ತು. ರಮಝಾನ್ ಮುಕ್ತಾಯದ ಪ್ರತೀಕವಾದ ಚಂದ್ರದರ್ಶನವನ್ನು ಘೋಷಿಸಲು ಸಿಡಿಸಿದ ಪಟಾಕಿ ಇರಬಹುದು ಎಂದು ಪತ್ರಿಕಾ ಕಚೇರಿಗಳಿಂದ ಕೂಡಿದ ಲಾಲ್‌ಚೌಕ್‌ನ ಮೂಲೆಯ ಕಟ್ಟಡವೊಂದರಲ್ಲಿ ಕಾರ್ಯನಿರತರಾಗಿದ್ದ ಪತ್ರಕರ್ತರು ತಪ್ಪಾಗಿ ಭಾವಿಸಿದರು.

ಎರಡು ಮಹಡಿ ಕೆಳಕ್ಕೆ ನೋಡಿದಾಗ ಯಾಸೀನ್‌ಗೆ ತಕ್ಷಣ ಅಪಾಯದ ಅರಿವಾಯಿತು. ತಮ್ಮ ಸಂಪಾದಕ ಶುಜಾತ್ ಬುಖಾರಿಯವರ ಕಾರಿನ ಕಿಟಕಿಗಳು ನಾಲ್ಕೂ ಕಡೆ ನುಚ್ಚುನೂರಾದ ದೃಶ್ಯ ಕಾಣಿಸಿತು. ಮೆಟ್ಟಲಿಳಿದು ಕಾರಿನತ್ತ ಧಾವಿಸಿದರು. ಆ ವೇಳೆಗಾಗಲೇ ಸಹೋದ್ಯೋಗಿ ಇರ್ಷದ್ ಅಹ್ಮದ್ ಸ್ಥಳದಲ್ಲಿದ್ದರು. ಕಾರಿನ ಸುತ್ತ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.

"ಸಂಪಾದಕರು ಗುಂಡು ತಗುಲಿ ಬಿದ್ದಿರುವುದನ್ನು ರಸ್ತೆಯ ಅಂಚಿನಿಂದ ನೋಡಿದೆ. ಯಾವುದೇ ಚಲನೆ ಇರದೇ ಸ್ತಬ್ಧವಾಗಿದ್ದರು. ರಕ್ತದ ಮಡುವಿನಲ್ಲಿ ನೆಲಕ್ಕೊರಗಿದ್ದರು" ಎಂದು ಯಾಸೀನ್ ನೆನಪಿಸಿಕೊಳ್ಳುತ್ತಾರೆ.

ಹುಸಿಯಾದ ನಿರೀಕ್ಷೆ ಕಿಟಕಿಯಿಂದ ಎಲ್ಲ ಚಲನ ವಲನಗಳನ್ನು ವೀಕ್ಷಿಸುತ್ತಿದ್ದ 20 ಮಂದಿಯ ಸಂಪಾದಕೀಯ ತಂಡಕ್ಕೆ ಘಟನೆ ಅರಿವಿಗೆ ಬರುತ್ತಿದ್ದಂತೆ ಕಚೇರಿಯಲ್ಲಿ ಕಣ್ಣೀರ ಕೋಡಿ ಹರಿಯಿತು. ಎಲ್ಲರೂ ಗುಂಪಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮತ್ತು ಶ್ರೀ ಮಹಾರಾಜಾ ಹರಿಸಿಂಗ್ ಆಸ್ಪತ್ರೆಗೆ ಹೋದರು. ಇದಕ್ಕೂ ಮುನ್ನ ಮೂರು ಬಾರಿ ಪ್ರಾಣಾಪಾಯದಿಂದ ಬುಖಾರಿ ಪಾರಾಗಿದ್ದರು. ಈ ಬಾರಿಯೂ ತೀರಾ ಸನಿಹದಿಂದ ಹೊಡೆದ 16 ಗುಂಡುಗಳು ಅವರ ದೇಹ ಹೊಕ್ಕಿದ್ದರೂ, ಪವಾಡಸದೃಶವಾಗಿ ಉಳಿದುಕೊಳ್ಳಬಹುದು ಎಂಬ ಕ್ಷೀಣ ಆಸೆ ಈ ತಂಡಕ್ಕಿತ್ತು. ಆದರೆ ಈ ಬಾರಿ ದುರಾದೃಷ್ಟ. ಬುಖಾರಿಯವರನ್ನು ಆಸ್ಪತ್ರೆಗೆ ತರುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

"ಇದು ಉದ್ಯೋಗಿಗಳನ್ನು ಅಧೀರರನ್ನಾಗಿಸಿತು. ಏನು ಸಂಭವಿಸಿತು ಎನ್ನುವುದನ್ನು ಅರಿತುಕೊಳ್ಳುವುದೂ ಸಾಧ್ಯವಾಗಲಿಲ್ಲ" ಎಂದು ವರದಿಗಾರ & ಉಪಸಂಪಾದಕ ತಾನಿಶ್ ನಬಿ ಹೇಳಿದರು. ಆಘಾತ ಹಾಗೂ ಗೊಂದಲದಿಂದ ಇದ್ದ ವರದಿಗಾರರು, ಉಪಸಂಪಾದಕರು ಹಾಗೂ ಮಾರಾಟ ಸಿಬ್ಬಂದಿ ಸೇರಿ 10 ಮಂದಿ ಸಿಬ್ಬಂದಿ ಪೊಲೀಸ್ ನಿಯಂತ್ರಣ ಕಚೇರಿಗೆ ಕಾನೂನು ವಿಧಿವಿಧಾನಗಳನ್ನು ನೆರವೇರಿಸುವ ಸಲುವಾಗಿ ಬುಖಾರಿ ಮೃತದೇಹವನ್ನು ಒಯ್ಯುತ್ತಿದ್ದ ಪೊಲೀಸ್ ವಾಹನವನ್ನು ಹಿಂಬಾಲಿಸಿದರು. ಬುಖಾರಿಯವರ ಹುಟ್ಟೂರಾದ ಶ್ರೀನಗರದಿಂದ 41 ಕಿಲೋಮೀಟರ್ ದೂರದ ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಎಂಬಲ್ಲಿಗೆ ಮೃತದೇಹವನ್ನು ಒಯ್ಯಲು ಕುಟುಂಬಸ್ಥರು ನಿರ್ಧರಿಸಿದ ಬಳಿಕ, ದುಃಖತಪ್ತರಾಗಿದ್ದ ಪತ್ರಿಕಾ ಸಿಬ್ಬಂದಿ ಕಚೇರಿಗೆ ಹಿಂದಿರುಗಿದರು.

ಅತೀವ ದುಃಖ ಹಾಗೂ ಆಘಾತದಿಂದ ಇದ್ದ ಸಿಬ್ಬಂದಿ ಸಭೆ ಸೇರಿ ರೈಸಿಂಗ್ ಕಾಶ್ಮೀರ ಪತ್ರಿಕೆಯ ದಿನದ ಸಂಚಿಕೆಯನ್ನು ಹೊರತರದಿರಲು ನಿರ್ಧರಿಸಿದರು. ಆದರೆ ಪರಸ್ಪರ ಸಮಾಧಾನಿಸಿಕೊಳ್ಳಲು ಒಬ್ಬರಿಗೊಬ್ಬರು ಮಾತನಾಡತೊಡಗಿದಾಗ ಅಲ್ಲಿನ ಚಿತ್ರಣವೇ ಬದಲಾಯಿತು. ಖಿನ್ನತೆಯ ಬದಲು ನಿರ್ದಿಷ್ಟ ಉದ್ದೇಶದ ಛಾತಿ ಮೂಡಿತು. "2015ರಲ್ಲಿ ಪಾರ್ಶ್ವವಾಯುವಿನಿಂದಾಗಿ ಹಲವು ತಿಂಗಳುಗಳ ಕಾಲ ಹಾಸಿಗೆ ಹಿಡಿದಿದ್ದ ಶುಜಾತ್ ಆಗ ಹೇಳಿದ್ದ ಮಾತು ನಮ್ಮ ನೆನಪಿಗೆ ಬಂತು" ಎಂದು ಪತ್ರಿಕೆಯಲ್ಲಿ ಬುಖಾರಿ ನಂತರದ ಹುದ್ದೆಯಲ್ಲಿದ್ದ ಯಾಸೀನ್ ವಿವರಿಸಿದರು. "ನಾನು ಇಲ್ಲದಿದ್ದರೂ ಈ ಸಂಸ್ಥೆ ಮುನ್ನಡೆಯಬೇಕು ಎಂದು ಅವರು ಹೇಳಿದ್ದರು". ಇಂಥ ಸಂದಿಗ್ಧ ಸ್ಥಿತಿಯಲ್ಲಿ ಶುಜಾತ್ ಇದ್ದಿದ್ದರೆ ಏನು ಮಾಡುತ್ತಿದ್ದರು? ಮತ್ತು ಹಂತಕರಿಗೆ ಅತ್ಯಂತ ಸೂಕ್ತ ಪ್ರತಿಸ್ಪಂದನೆ ಯಾವುದು? ಎಂಬ ಎರಡು ಪ್ರಶ್ನೆಗಳನ್ನುಪತ್ರಕರ್ತರು ತಮ್ಮಲ್ಲೇ ಕೇಳಿಕೊಂಡರು. "ಅವರಿಗೆ ಉತ್ತರ ಸ್ಪಷ್ಟವಾಗಿತ್ತು. ತಕ್ಷಣ ಕಾರ್ಯಕ್ಷೇತ್ರಕ್ಕೆ ಧುಮುಕಿ ಪತ್ರಿಕೆಯನ್ನು ಮುದ್ರಣಕ್ಕೆ ಸಿದ್ಧಪಡಿಸುವುದು" ಎಂದು ಯಾಸೀನ್ ಹೇಳಿದರು.

ಈ ನತದೃಷ್ಟ ದಿನ ಗುಂಡಿಗೆ ಬಲಿಯಾಗುವ ಮುನ್ನ ಬುಖಾರಿ, ಕಾಶ್ಮೀರ ಬಗೆಗಿನ ವಿಶ್ವಸಂಸ್ಥೆಯ ವರದಿಯನ್ನು ಲೀಡ್ ಮಾಡಲು ಮತ್ತು ಈದ್ ಚಂದ್ರದರ್ಶನವನ್ನು ಎರಡನೇ ಲೀಡ್ ಮಾಡಲು ನಿರ್ಧರಿಸಿದ್ದರು!

ಕೃಪೆ : The Hindu

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News