ಅಮೆರಿಕ: ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ ಆರೋಪಿಯನ್ನು ದೋಷಿಯೆಂದು ತೀರ್ಪಿತ್ತ ಕೋರ್ಟ್

Update: 2018-06-17 16:54 GMT

ವಾಶಿಂಗ್ಟನ್,ಜೂ.17: ಅಮೆರಿಕದಲ್ಲಿ ಹತ್ಯೆಗೀಡಾದ ಭಾರತೀಯ ಮೂಲದ ವಿದ್ಯಾರ್ಥಿಯ ಕುಟುಂಬಕ್ಕೆ ಸತತ ನಾಲ್ಕು ವರ್ಷಗಳ ಕಾನೂನು ಹೋರಾಟದ ಬಳಿಕ ಕೊನೆಗೂ ನ್ಯಾಯ ದೊರೆತಿದೆ. ದಕ್ಷಿಣ ಇಲಿನಾಯ್ಸಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪ್ರವೀಣ್ ವರ್ಗೀಸ್  ಹತ್ಯೆ ಪ್ರಕರಣದ ಆರೋಪಿಯನ್ನು ಅಮೆರಿಕದ ನ್ಯಾಯಾಲಯವೊಂದು ಶನಿವಾರ ದೋಷಿಯೆಂದು ಪರಿಗಣಿಸಿ ತೀರ್ಪು ನೀಡಿದೆ.

ಸುಮಾರು ಐದು ದಿನಗಳ ಕಾಲ ನಾಪತ್ತೆಯಾಗಿದ್ದ ಪ್ರವೀಣ್‌ವರ್ಗೀಸ್ ಆನಂತರ ಶವವಾಗಿ ಪತ್ತೆಯಾಗಿದ್ದ. ಆರಂಭದಲ್ಲಿ ತನಿಖಾಧಿಕಾರಿಗಳು ತೀವ್ರ ತಾಪಮಾನದಿಂದಾಗಿ ವರ್ಗೀಸ್ ಮೃತಪಟ್ಟಿರಬಹುದೆಂದು ವರದಿ ನೀಡಿದ್ದರು.

 ಆದರೆ ಅದನ್ನು ಒಪ್ಪದ ಮೃತ ವಿದ್ಯಾರ್ಥಿಯ ಕುಟುಂಬವು, ನ್ಯಾಯ ಕೋರಿ ಕೋರ್ಟ್ ಮೆಟ್ಟಲೇರಿತ್ತು. ಪೊಲೀಸರು ನಡೆಸಿದ ಮರಣೋತ್ತರ ಪರೀಕ್ಷೆಗೂ, ಸ್ಥಳೀಯ ಕೊರೊನರ್ (ತನಿಖಾಧಿಕಾರಿ) ಅವರ ತನಿಖಾ ವರದಿ ವ್ಯತಿರಿಕ್ತವಾಗಿದೆಯೆಂದು ಸಂತ್ರಸ್ತ ಕುಟುಂಬ ನ್ಯಾಯಾಲಯದಲ್ಲಿ ವಾದಿಸಿತ್ತು. ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಲಯವು ಕೊರ್ಬೊನ್‌ಡೊಲ್ ನಗರದ ಪೊಲೀಸ್ ವರಿಷ್ಠನನ್ನು ಉಚ್ಚಾಟಿಸಿತ್ತು.

 ಆನಂತರ ನಡೆದ ತನಿಖೆ ನಡೆಸಿದ 12 ಮಂದಿ ಸದಸ್ಯರ ನ್ಯಾಯಪೀಠವು, ದಕ್ಷಿಣ ಇಲಿನಾಯ್ಸಿನ ನಿವಾಸಿ ಗೇಗ್ ಬೆಥುನ್ ಎಂಬಾತ, ವರ್ಗೀಸ್‌ನ ಹಂತಕನೆಂಬುದನ್ನು ತನಿಖೆಯಿಂದ ಪತ್ತೆ ಹಚ್ಚಿತ್ತು.

 2014ರ ಫೆಬ್ರವರಿ 12ರಂದು ರಾತ್ರಿ ತಾನು ವರ್ಗೀಸ್ ಜೊತೆ ಪಾರ್ಟಿ ಮುಗಿಸಿಕೊಂಡು ಬಂದ ವಾಪಸಾಗುತ್ತಿದ್ದಾಗ ವರ್ಗೀಸ್ ಕೊಕೈನ್ ಮಾದಕದ್ರವ್ಯವನ್ನು ಖರೀದಿಸಲು ಬಯಸಿದ್ದನೆನ್ನಲಾಗಿದೆ. ಈ ಹಂತದಲ್ಲಿ ಇಬ್ಬರ ನಡುವೆ ವಾಗ್ವಾದವೇರ್ಪಟ್ಟಿತ್ತು. ಆಗ 19 ವರ್ಷದ ಬೆಥುನ್, ವರ್ಗೀಸ್ ನ ಹಿಗ್ಗಾಮಗ್ಗಾ ಥಳಿಸಿದನ್ನಲಾಗಿದೆ. ಆನಂತರ ವರ್ಗೀಸ್ ಜೀವಭಯದಿಂದ ಸಮೀಪದ ಕಾಡಿನತ್ತ ಓಡಿಹೋಗಿದ್ದ, ಅಲ್ಲಿ ಸಾವನ್ನಪ್ಪಿದ್ದನೆಂದು ತನಿಖೆಯಿಂದ ಬಹಿರಂಗಗೊಂಡಿತ್ತು.

ಬೆಥುನ್ ವಿರುದ್ಧ ಮೃತನನ್ನು ದರೋಡೆಗೈದ ಆರೋಪವನ್ನು ಕೂಡಾ ಹೊರಿಸಲಾಗಿದೆ. ಬೆಥುನ್ ದೋಷಿಯೆಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು 20ರಿಂದ 60 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

 ಆದರೆ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಘೋಷಿಸುವ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News