ನೆತನ್ಯಾಹು ಸೇರಿದಂತೆ ಇಸ್ರೇಲ್ ಅಧಿಕಾರಿಗಳ ವಿರುದ್ಧ ಐಸಿಸಿ ಬಂಧನ ವಾರಂಟ್ ಜಾರಿಯ ಸಾಧ್ಯತೆ: ವರದಿ

Update: 2024-04-29 16:01 GMT

PC : X/@Currentreport1

ಜೆರುಸಲೇಮ್: ಗಾಝಾದಲ್ಲಿ ಹಮಾಸ್ ಎದುರು ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದ ಆರೋಪದ ಮೇಲೆ ಇಸ್ರೇಲ್‍ನ ಅಧಿಕಾರಿಗಳ ವಿರುದ್ಧ ಐಸಿಸಿ(ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್) ಬಂಧನ ವಾರಂಟ್ ಜಾರಿಗೊಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 7ರಂದು ಇಸ್ರೇಲ್‍ನ ಮೇಲೆ ಹಮಾಸ್ ನಡೆಸಿದ ದಾಳಿ ಮತ್ತು ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ಪ್ರತಿದಾಳಿಯ ಸಂದರ್ಭ ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಸಂಭವಿಸಿದೆಯೇ ಎಂದು ಐಸಿಸಿ ತನಿಖೆ ನಡೆಸುತ್ತಿದ್ದು ಆರೋಪ ಸಾಬೀತಾದರೆ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬಹುದು.

ಗಾಝಾದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆ ಆರೋಪದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಇಸ್ರೇಲ್‍ನ ಉನ್ನತ ಸರಕಾರಿ ಅಧಿಕಾರಿಗಳು ಮತ್ತು ಸೇನಾಧಿಕಾರಿಗಳ ವಿರುದ್ಧ ಐಸಿಸಿ ಶೀಘ್ರವೇ ಬಂಧನ ವಾರಂಟ್ ಜಾರಿಗೊಳಿಸಬಹುದು ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್‍ನ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಝ್ ` ತೀವ್ರವಾದ ಯೆಹೂದಿ ವಿರೋಧಿ ಅಲೆಯ ಅಪಾಯದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಇಸ್ರೇಲ್ ರಾಯಭಾರಿ ಕಚೇರಿಗಳಿಗೆ ಸೂಚಿಸಲಾಗಿದೆ' ಎಂದಿದ್ದಾರೆ.

ಇಸ್ರೇಲ್‍ನ ಉನ್ನತ ರಾಜಕೀಯ ಮತ್ತು ಭದ್ರತಾ ಅಧಿಕಾರಿಗಳ ವಿರುದ್ಧ ಐಸಿಸಿ ಬಂಧನ ವಾರಂಟ್ ಜಾರಿಗೊಳಿಸುವುದಿಲ್ಲ ಎಂದು ನಿರೀಕ್ಷಿಸುತ್ತಿದ್ದೇವೆ. ನಾವು ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ' ಎಂದವರು ಹೇಳಿದ್ದಾರೆ.

ಐಸಿಸಿ ಬಂಧನ ವಾರಂಟ್ ಜಾರಿಗೊಳಿಸಿದರೆ ಅದು ಇಸ್ರೇಲ್‍ನ ಕೃತ್ಯಗಳ ಮೇಲೆ ಪರಿಣಾಮ ಬೀರದು. ಆದರೆ ಅಪಾಯಕಾರಿ ಪೂರ್ವ ನಿದರ್ಶನವನ್ನು ರೂಪಿಸಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್‍ನ ಮುಖಂಡರ ವಿರುದ್ಧವೂ ಐಸಿಸಿ ಬಂಧನ ವಾರಂಟ್ ಜಾರಿಗೊಳಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಇಸ್ರೇಲ್ ಐಸಿಸಿಯ ಸದಸ್ಯನಲ್ಲ ಮತ್ತು ಅದರ ನ್ಯಾಯವ್ಯಾಪ್ತಿಯನ್ನು ಮಾನ್ಯ ಮಾಡುವುದಿಲ್ಲ. ಆದರೆ ಫೆಲೆಸ್ತೀನ್ ಪ್ರದೇಶಗಳನ್ನು 2015ರಲ್ಲಿ ಸದಸ್ಯ ರಾಷ್ಟ್ರದ ಸ್ಥಾನಮಾನದೊಂದಿಗೆ ಸೇರಿಸಲಾಗಿದೆ. ಇಸ್ರೇಲ್‍ನಲ್ಲಿ ಹಮಾಸ್ ಹೋರಾಟಗಾರರು ಮತ್ತು ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ಯಾವುದೇ ಸಂಭಾವ್ಯ ಯುದ್ಧಾಪರಾಧಗಳು ಐಸಿಸಿಯ ನ್ಯಾಯ ವ್ಯಾಪ್ತಿಯಡಿ ಬರುತ್ತದೆ ಎಂದು ಅಕ್ಟೋಬರ್‍ನಲ್ಲಿ ಐಸಿಸಿಯ ಮುಖ್ಯ ನ್ಯಾಯಾಧಿಕಾರಿ ಕರೀಮ್ ಖಾನ್ ಹೇಳಿದ್ದರು. ಗಾಝಾದಲ್ಲಿ ಸಂಭಾವ್ಯ ಅಪರಾಧಗಳ ಬಗ್ಗೆ ತಮ್ಮ ತಂಡ ಸಕ್ರಿಯವಾಗಿ ವಿಚಾರಣೆ ನಡೆಸುತ್ತದೆ ಮತ್ತು ಕಾನೂನನ್ನು ಉಲ್ಲಂಘಿಸಿದವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದವರು ಹೇಳಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,200 ಮಂದಿ ಸಾವನ್ನಪ್ಪಿದ್ದು (ಇವರಲ್ಲಿ ಹೆಚ್ಚಿನವರು ನಾಗರಿಕರು) 253 ಜನರನ್ನು ಒತ್ತೆಸೆರೆಯಲ್ಲಿ ಇರಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಅಕ್ಟೋಬರ್ 7ರ ಬಳಿಕ ಇಸ್ರೇಲ್ ಗಾಝಾದಲ್ಲಿ ನಡೆಸಿದ ಪ್ರತಿದಾಳಿಯಲ್ಲಿ 34,000ಕ್ಕೂ ಅಧಿಕ ಫೆಲೆಸ್ತೀನೀಯರು ಸಾವನ್ನಪ್ಪಿದ್ದು ಇವರಲ್ಲಿ ಹೆಚ್ಚಿನವರು ನಾಗರಿಕರು. ಗಾಝಾ ಪ್ರದೇಶದಲ್ಲಿ ವ್ಯಾಪಕ ವಿನಾಶ, ನಾಶ-ನಷ್ಟ ಸಂಭವಿಸಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ವರದಿ ಮಾಡಿದೆ.

ಐಸಿಸಿ ಮತ್ತು ಐಸಿಜೆ

ಐಸಿಸಿಯಲ್ಲಿ ದಾಖಲಿಸಿರುವ ಪ್ರಕರಣ ಐಸಿಜೆಯಲ್ಲಿ ಇಸ್ರೇಲ್ ವಿರುದ್ಧ ದಾಖಲಾಗಿರುವ ನರಮೇಧ ಪ್ರಕರಣಕ್ಕಿಂತ ಪ್ರತ್ಯೇಕವಾಗಿದೆ. ಎರಡೂ ಕೋರ್ಟ್‍ಗಳು ನೆದರ್ಲ್ಯಾಂಡ್‍ನ ಹೇಗ್‍ನಲ್ಲಿವೆ. ಜಾಗತಿಕ ನ್ಯಾಯಾಲಯ ಎಂದು ಗುರುತಿಸಲಾಗುವ ಐಸಿಜೆ (ಇಂಟರ್‍ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್) ವಿಶ್ವಸಂಸ್ಥೆಯ ನ್ಯಾಯಾಲಯವಾಗಿದ್ದು ದೇಶಗಳ ನಡುವಿನ ವ್ಯಾಜ್ಯಗಳನ್ನು ವಿಚಾರಣೆ ನಡೆಸುತ್ತದೆ. ಐಸಿಸಿ(ಇಂಟರ್‍ನ್ಯಾಷನಲ್ ಕ್ರಿಮಿನಲ್ ಕೋರ್ಟ್) ಒಪ್ಪಂದ ಆಧಾರಿತ ಕ್ರಿಮಿನಲ್ ಕೋರ್ಟ್ ಆಗಿದ್ದು ಯುದ್ಧ ಅಪರಾಧಗಳಿಗೆ ವೈಯಕ್ತಿಕ ಜವಾಬ್ದಾರಿಯನ್ನು ಗುರುತಿಸುವತ್ತ ಕೇಂದ್ರೀಕರಿಸಲ್ಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News