ಪಿಪಿಎಫ್ ಕುರಿತು ಹೆಚ್ಚು ಗೊತ್ತಿರದ ಈ ಮಾಹಿತಿಗಳು ನಿಮಗೆ ಅಚ್ಚರಿಯನ್ನುಂಟು ಮಾಡಬಹುದು

Update: 2018-06-18 12:24 GMT

ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್(ಪಿಪಿಎಫ್) ಅಥವಾ ಸಾರ್ವಜನಿಕ ಭವಿಷ್ಯನಿಧಿ ಯೋಜನೆಯು ಹಣವನ್ನು ಉಳಿತಾಯ ಮಾಡಲು ಬಯಸುವ ಮಧ್ಯಮ ವರ್ಗದವರ ಪಾಲಿಗೆ ಹಲವಾರು ದಶಕಗಳಿಂದಲೂ ಉತ್ತಮ ಮಾರ್ಗವಾಗಿ ಮುಂದುವರಿದುಕೊಂಡು ಬಂದಿದೆ. ಈಗಿನ ಪೀಳಿಗೆಯವರೂ ಪಿಪಿಎಫ್‌ನಿಂದ ಆಕರ್ಷಿತರಾಗಿದ್ದಾರೆ. ನಿಗದಿಯಾದ ಮತ್ತು ಖಾತ್ರಿಯಾದ ಪ್ರತಿಫಲ,ಸರಕಾರದಿಂದ ಸುರಕ್ಷತೆ ಹೊಂದಿರುವ ಪಿಪಿಎಫ್ ಯಾವುದೇ ರಗಳೆಗಳಿಲ್ಲದ ಯೋಜನೆಯಾಗಿದ್ದು, ಹೂಡಿಕೆಯ ಅಪಾಯಗಳಿಂದ ದೂರವಿರಬಯಸುವ ಕೋಟ್ಯಂತರ ಹೂಡಿಕೆದಾರರು ಈ ಯೋಜನೆಯಲ್ಲಿ ತಮ್ಮ ಉಳಿತಾಯಗಳನ್ನು ತೊಡಗಿಸಿದ್ದಾರೆ. ಪಿಪಿಎಫ್ ಕುರಿತು ಹೆಚ್ಚಿನ ಜನರಿಗೆ ಗೊತ್ತಿರದ ಕೆಲವು ಮಾಹಿತಿಗಳಿಲ್ಲಿವೆ.....

►ಜಂಟಿ ಹೆಸರುಗಳಲ್ಲಿ ಖಾತೆ ತೆರೆಯುವಿಕೆ

ಜಂಟಿ ಹೆಸರುಗಳಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಲು ಅವಕಾಶವಿಲ್ಲ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ ತಮ್ಮ ಅಪ್ರಾಪ್ತ ವಯಸ್ಕ ಮಕ್ಕಳ ಪರವಾಗಿ ಹೆತ್ತವರು ಖಾತೆಯನ್ನು ತೆರೆಯಬಹುದು ಎನ್ನುವುದು ನಿಮಗೆ ಗೊತ್ತೇ? ಹೌದು,ಅದು ಸಾಧ್ಯವಿದೆ. ಹೆತ್ತವರಿಬ್ಬರೂ ಜೀವಂತವಿಲ್ಲದಿದ್ದರೆ ಅಥವಾ ಬದುಕಿರುವ ತಂದೆ ಅಥವಾ ತಾಯಿ ಯಾವುದೇ ಕೆಲಸ ಮಾಡಲು ಅಸಮರ್ಥರಾಗಿದ್ದರೆ ನ್ಯಾಯಾಲಯದಿಂದ ನೇಮಕಗೊಂಡ ಪೋಷಕರು ಅಪ್ರಾಪ್ತ ವಯಸ್ಕರ ಪರವಾಗಿ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕ ಮಕ್ಕಳ ಪರವಾಗಿ ಪಿಪಿಎಫ್ ಖಾತೆಗಳನ್ನು ತೆರೆಯಲು ಹೆತ್ತವರಿಗೆ ಅವಕಾಶವಿದೆಯಾದರೂ ಅವರು ಒಬ್ಬನೇ ಮಗ/ಮಗಳ ಪರವಾಗಿ ಎರಡು ಪ್ರತ್ಯೇಕ ಖಾತೆಗಳನ್ನು ನಿರ್ವಹಿಸುವಂತಿಲ್ಲ. ಅಪ್ರಾಪ್ತ ವಯಸ್ಕರು ಪ್ರಾಯಕ್ಕೆ ಬಂದ ನಂತರ ಅವರನ್ನೇ ಪಿಪಿಎಫ್ ಖಾತೆದಾರರು ಎದು ಪರಿಗಣಿಸಲಾಗುತ್ತದೆಯೇ ಹೊರತು ಕಾನೂನು ಸಮ್ಮತ ಪೋಷಕರನ್ನಲ್ಲ.

►ಪಿಪಿಎಫ್ ಖಾತೆಯನ್ನು ಜಪ್ತಿ ಮಾಡುವಂತಿಲ್ಲ

ಪಿಪಿಎಫ್ ಖಾತೆಯಲ್ಲಿರುವ ಹಣವು ಖಾತೆದಾರನಿಗೆ ಸೇರಿದ್ದು,ಯಾರೂ ಅದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಖಾತೆದಾರ ಹೊಂದಿರುವ ಯಾವುದೇ ಸಾಲದ ಮರುವಸೂಲಿಗಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಪಿಪಿಎಫ್ ಖಾತೆಯನ್ನು ಜಪ್ತಿ ಮಾಡುವಂತಿಲ್ಲ. ಸಾಲಬಾಕಿಯ ವಸೂಲಿಗಾಗಿ ಪಿಪಿಎಫ್ ಖಾತೆಯ ಜಪ್ತಿಗೆ ನ್ಯಾಯಾಲಯಗಳೂ ಆದೇಶಿಸುವಂತಿಲ್ಲ. ಇದು ಮಿಲಿಯಗಟ್ಟಲೆ ಪಿಪಿಎಫ್ ಖಾತೆದಾರರಿಗಿರುವ ದೊಡ್ಡ ರಕ್ಷಣೆಯಾಗಿದೆ. ಆದರೆ ಆದಾಯ ತೆರಿಗೆ ಇಲಾಖೆ ಮಾತ್ರ ತೆರಿಗೆ ಬಾಕಿಯ ವಸೂಲಿಗಾಗಿ ಪಿಪಿಎಫ್ ಖಾತೆಯನ್ನು ಜಪ್ತಿ ಮಾಡಬಹುದಾಗಿದೆ.

►ನಾಮಿನಿಗಳ ನೇಮಕ

ಪಿಪಿಎಫ್ ಒಬ್ಬರಿಗಿಂತ ಹೆಚ್ಚು ನಾಮಿನಿಗಳನ್ನು ನೇಮಿಸಲು ಖಾತೆದಾರನಿಗೆ ಅವಕಾಶ ನೀಡುತ್ತದೆ. ಒಬ್ಬರಿಗಿಂತ ಹೆಚ್ಚು ನಾಮಿನಿಗಳನ್ನು ನೇಮಕಗೊಳಿಸಿದ್ದರೆ ಖಾತೆದಾರನು ಅವರಿಗೆ ಸಿಗಬೇಕಾದ ಶೇಕಡಾವಾರು ಭಾಗವನ್ನು ಉಲ್ಲೇಖಿಸಬೇಕಾಗುತ್ತದೆ. ಆದರೆ ಅಪ್ರಾಪ್ತ ವಯಸ್ಕರ ಪರವಾಗಿ ತೆರೆಯಲಾದ ಖಾತೆಗಳಲ್ಲಿ ನಾಮಿನಿಗಳ ನೇಮಕಕ್ಕೆ ಅವಕಾಶವಿಲ್ಲ. ಪಿಪಿಎಫ್ ಖಾತೆಯ ಅವಧಿಯಲ್ಲಿ ಯಾವಾಗ ಬೇಕಾದರೂ ನಾಮಿನಿಗಳನ್ನು ಬದಲಿಸುವ ಮತ್ತು ರದ್ದುಗೊಳಿಸುವ ಅಧಿಕಾರ ಖಾತೆದಾರನಿಗಿದೆ. ಆದರೆ ಯಾವುದೇ ಟ್ರಸ್ಟ್‌ನ್ನು ನಾಮಿನಿಯನ್ನಾಗಿ ನೇಮಕಗೊಳಿಸುವಂತಿಲ್ಲ.

  ಖಾತೆದಾರ ನಿಧನನಾದ ಬಳಿಕ ಖಾತೆಯಲ್ಲಿನ ಹಣವನ್ನು ಪಡೆದುಕೊಳ್ಳಲು ನಾಮಿನಿಗೆ ಹಕ್ಕು ಇದ್ದು,ಕಾನೂನು ಸಮ್ಮತ ವಾರಸುದಾರರಿಗೆ ಒಪ್ಪಿಸಲು ಟ್ರಸ್ಟಿಯಾಗಿ ಅದನ್ನು ತನ್ನ ಬಳಿ ಇರಿಸಿಕೊಳ್ಳಬಹುದಾಗಿದೆ.

►ಲಾಕ್-ಇನ್ ಪೀರಿಯಡ್ ಕುರಿತು ತಪ್ಪುಗ್ರಹಿಕೆ

 ಪಿಪಿಎಫ್ ಖಾತೆಯನ್ನು 15 ವರ್ಷಗಳವರೆಗೂ ಮುಚ್ಚುವಂತಿಲ್ಲ ಮತ್ತು ಈ ಅವಧಿಯನ್ನು ಖಾತೆ ಆರಂಭಿಸಿದ ದಿನಾಂಕದಿಂದ ಲೆಕ್ಕ ಹಾಕಲಾಗುತ್ತದೆ ಎನ್ನುವುದು ಸಾಮಾನ್ಯ ತಪ್ಪುಗ್ರಹಿಕೆಯಾಗಿದೆ. ಅದು ಹಾಗಲ್ಲ. ಪಿಪಿಎಫ್ ಯೋಜನೆಯ ನಿಯಮಗಳಂತೆ ಪಕ್ವತೆಯ ದಿನಾಂಕವನ್ನು ಹಣವನ್ನು ಠೇವಣಿ ಮಾಡಿದ ಹಣಕಾಸಿನ ವರ್ಷದ ಅಂತ್ಯದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ ನೀವು ಯಾವ ತಿಂಗಳಲ್ಲಿ ಅಥವಾ ದಿನಾಂಕದಂದು ಖಾತೆ ಆರಂಭಿಸಿದ್ದಿರಿ ಎನ್ನುವುದು ಮುಖ್ಯವಾಗುವುದಿಲ್ಲ. ಉದಾಹರಣೆಗೆ ನೀವು 2018,ಜೂ.10 ರಂದು ಖಾತೆ ಆರಂಭಿಸಿ ಮೊದಲ ಠೇವಣಿಯಿರಿಸಿದ್ದರೆ 15 ವರ್ಷಗಳ ಲಾಕ್-ಇನ್ ಅವಧಿ 2019,ಮಾ.31ರಿಂದ ಆರಂಭಗೊಳ್ಳುತ್ತದೆ ಮತ್ತು ಖಾತೆಯು 2034,ಎ.1ರಂದು ಪಕ್ವಗೊಳ್ಳುತ್ತದೆ.

►ಪಿಪಿಎಫ್ ಖಾತೆಯನ್ನು ಸ್ಥಗಿತಗೊಳಿಸುವಿಕೆ

 ಕೆಲವು ಖಾತೆದಾರರು ತಮ್ಮ ಪಿಪಿಎಫ್ ಖಾತೆಗೆ ಹಣ ಹಾಕುವುದನ್ನೇ ಮರೆಯುತ್ತಾರೆ. ಕನಿಷ್ಠ ಠೇವಣಿ ಹಣವಿಲ್ಲದಿದ್ದರೆ ಖಾತೆಯು ಸ್ಥಗಿತಗೊಳ್ಳುತ್ತದೆ. ಆದರೆ ಅದರಲ್ಲಿರುವ ಹಣ ಬಡ್ಡಿಯ ಜೊತೆಗೆೆ ಪಕ್ವತೆಯ ಬಳಿಕವೇ ದೊರೆಯುತ್ತದೆ. ಹೀಗೆ ಸ್ಥಗಿತಗೊಂಡ ಖಾತೆಯಿಂದ ಹಣ ಹಿಂದೆಗೆಯಲು ಅಥವಾ ಅದರ ಮೆಲೆ ಸಾಲ ಪಡೆಯಲು ಅವಕಾಶವಿಲ್ಲ. ನೀವು ಸಾಲ ಅಥವ ಹಿಂದೆಗೆತದ ಸೌಲಭ್ಯ ಬಯಸಿದ್ದರೆ ನಿಗದಿತ ದಂಡ ಮತ್ತು ಸ್ಥಗಿತಗೊಂಡ ಅವಧಿಗೆ ಕನಿಷ್ಠ ಚಂದಾವನ್ನು ಕಟ್ಟಿ ಖಾತೆಯನ್ನು ಮುಂದುವರಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News