ಮಹಿಳೆಯ ಎದೆಗೆ ಒದ್ದ ಪಂಚಾಯತ್ ಅಧ್ಯಕ್ಷನ ಬಂಧನ

Update: 2018-06-18 13:06 GMT

ಹೈದರಾಬಾದ್, ಜೂ.18: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಲು ತನ್ನ ಸಂಬಂಧಿಕರ ಜತೆ ಬಂದಿದ್ದ ಮಹಿಳೆಯೊಬ್ಬರ ಎದೆಗೆ ತುಳಿದ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಧರ್ಪಳ್ಳಿ ಮಂಡಲ ಅಧ್ಯಕ್ಷನೊಬ್ಬನನ್ನು ಬಂಧಿಸಲಾಗಿದೆ.

ಆರೋಪಿ ಇಮ್ಮಡಿ ಗೋಪಿಗೆ ಆ ಮಹಿಳೆ ತನ್ನ ಚಪ್ಪಲಿಯಿಂದ ಬಾರಿಸಿದ ನಂತರ ಆತ ಆಕೆಯನ್ನು ತುಳಿದಿದ್ದನೆನ್ನಲಾಗಿದ್ದು,  ತುಳಿತದ ರಭಸಕ್ಕೆ ಮಹಿಳೆ ನೆಲಕ್ಕೆ ಬಿದ್ದಿದ್ದಳು. ಇದರಿಂದ ಕೋಪಗೊಂಡ ಮಹಿಳೆಯ ಕುಟುಂಬ ಗೋಪಿಯನ್ನು ದೂಡಿದ್ದು ಘಟನೆಯ ವೀಡಿಯೋ ವೈರಲ್ ಆಗಿದೆ.

ಗೋಪಿಯಿಂದ ತಾನು ಖರೀದಿಸಿದ ಭೂಮಿಯನ್ನು ತನಗೆ ಹಸ್ತಾಂತರಿಸಲು ಆಗುತ್ತಿರುವ ವಿಳಂಬವನ್ನು ವಿರೋಧಿಸಿ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದರು. ಒಟ್ಟು 33 ಲಕ್ಷ ರೂ. ನೀಡಿ 10 ತಿಂಗಳ ಹಿಂದೆ ಭೂಮಿ ಖರೀದಿಸಲಾಗಿದ್ದರೂ ಜಮೀನಿನ ಬೆಲೆ ಹೆಚ್ಚಾಗಿದೆಯೆಂದು ಹೇಳಿಕೊಂಡು ಗೋಪಿ ರೂ 50 ಲಕ್ಷ ಹೆಚ್ಚುವರಿ ಹಣಕ್ಕೆ ಬೇಡಿಕೆಯಿರಿಸಿದ್ದ ಎಂದು ಆರೋಪಿಸಲಾಗಿದೆ.

ಇದಕ್ಕೊಪ್ಪದ ಮಹಿಳೆ ಗೋಪಿಗೆ ಚಪ್ಪಲಿಯಿಂದ ಹೊಡೆದ ಬೆನ್ನಿಗೆ ಆತ ಆಕೆಯ ಎದೆಗೆ ತುಳಿದಿದ್ದಾನೆ. ತೆಲಂಗಾಣ ರಾಷ್ಟ್ರ ಸಮಿತಿ ಜತೆ ನಂಟು ಹೊಂದಿರುವ ಆರೋಪಿ ಗೋಪಿ ಮಹಿಳೆಯ ಕುಟುಂಬ ಅಕ್ರಮವಾಗಿ ತನ್ನ ಜಮೀನು ಪ್ರವೇಶಿಸಿ ಹಾನಿಗೈದಿದೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News