ಕೊಚ್ಚಾರ್‌ಗೆ ರಜೆ ನೀಡಿ ಕಳುಹಿಸಿದ ಐಸಿಐಸಿಐ ಬ್ಯಾಂಕ್, ಬಕ್ಷಿ ನೂತನ ಸಿಒಒ

Update: 2018-06-18 18:19 GMT

ಹೊಸದಿಲ್ಲಿ,ಜೂ.18: ತನ್ನ ಸಿಇಒ ಚಂದಾ ಕೊಚ್ಚಾರ್ ವಿರುದ್ಧದ ವೀಡಿಯೊಕೋನ್ ಸಾಲ ಪ್ರಕರಣದಲ್ಲಿ ಆಂತರಿಕ ತನಿಖೆ ಪೂರ್ಣಗೊಳ್ಳುವವರೆಗೂ ಅವರು ರಜೆಯಲ್ಲಿರುತ್ತಾರೆ ಎಂದು ಐಸಿಐಸಿಐ ಬ್ಯಾಂಕ್ ಸೋಮವಾರ ತಿಳಿಸಿದೆ. ಬ್ಯಾಂಕಿನ ಎಲ್ಲ ವ್ಯವಹಾರಗಳನ್ನು ನಿರ್ವಹಿಸಲು ಸಂದೀಪ ಬಕ್ಷಿಯವರನ್ನು ಮುಖ್ಯ ನಿರ್ವಹಣಾಧಿಕಾರಿ(ಸಿಒಒ)ಯನ್ನಾಗಿ ಅದು ನೇಮಕಗೊಳಿಸಿದೆ.

ಹಾಲಿ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರನ್ಸ್‌ನ ಎಂಡಿ ಮತ್ತು ಸಿಇಒ ಆಗಿರುವ ಬಕ್ಷಿ ಅವರು ಜೂ.19ರಂದು ಬ್ಯಾಂಕಿನ ಸಿಒಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಅಧಿಕಾರಾವಧಿ ಐದು ವರ್ಷಗಳದ್ದಾಗಿರಲಿದೆ.

ವೀಡಿಯೊಕೋನ್ ಸಾಲ ಪ್ರಕರಣದಲ್ಲಿ ಆಂತರಿಕ ತನಿಖೆಯನ್ನು ನಡೆಸುವುದಾಗಿ ಬ್ಯಾಂಕು ಮೇ 30ರಂದು ಪ್ರಕಟಿಸಿತ್ತು. ಬ್ಯಾಂಕು ಉನ್ನತ ಆಡಳಿತದಲ್ಲಿ ಬದಲಾವಣೆ ಮಾಡಲಿದೆ ಎಂಬ ವರದಿಗಳಿಂದಾಗಿ ಸೋಮವಾರ ಶೇರು ಮಾರುಕಟ್ಟೆಯಲ್ಲಿ ಐಸಿಐಸಿಐ ಬ್ಯಾಂಕಿನ ಶೇರುಗಳ ಬೆಲೆಗಳಲ್ಲಿ ಶೇ.3.1ರಷ್ಟು ಏರಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News