ಉರ್ಸುಲಾ ಆ್ಯಂಡ್ರೆಸ್‌ರನ್ನು ಸೋನಿಯಾ ಮಾಡಿದ ಸುಳ್ಳರು

Update: 2018-06-18 18:34 GMT

ಹೆಣ್ಣು ಮಕ್ಕಳೇ ಎಚ್ಚರ, ಮೋದಿಯ ಉಗ್ರ ಅಭಿಮಾನಿಗಳು (ನಮೋಭಕ್ತರು) ಎಂದುಕೊಳ್ಳುವವರು ನಿಮಗೆ ಗೊತ್ತಿದ್ದರೆ ಹುಷಾರಾಗಿರಿ. ಅವರು ಯಾವಾಗ ನಿಮ್ಮ ಫೋಟೊವನ್ನು ಯಾವುದೋ ಅರೆ ಬೆತ್ತಲೆ ಫೋಟೊದೊಂದಿಗೆ ಕ್ಲಬ್ ಮಾಡಿ ವೈರಲ್ ಮಾಡುವರೋ ಗೊತ್ತಿಲ್ಲ. ಇಂತಹವರು ನನ್ನ ಅಭಿಮಾನಿಗಳಲ್ಲ ಎಂದು ಇವತ್ತಿಗೂ ಮೋದಿಯಾಗಲಿ, ಬಿಜೆಪಿಯಾಗಲಿ ನಿರಾಕರಣೆ ಮಾಡಿಲ್ಲ. ಮೋದಿಯವರು ಟ್ವಿಟರ್‌ನಲ್ಲಿ ಫಾಲೋ ಮಾಡುವ ವ್ಯಕ್ತಿಗಳಲ್ಲಿ ಹಲವಾರು ಲಂಪಟ ಬುದ್ಧಿಯ ವಿಕೃತರಿದ್ದಾರೆ. ಅವರ ಟ್ವೀಟ್‌ಗಳನ್ನು ಗಮನಿಸಿದರೆ ಅವರ ಯೋಗ್ಯತೆ, ಅಭಿರುಚಿ ಗೊತ್ತಾಗಿ ಬಿಡುತ್ತದೆ.

ಮಿಥ್ಯ: ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೊವನ್ನು ವೈರಲ್ ಮಾಡಲಾ ಗಿದ್ದು ಸೋನಿಯಾ ಗಾಂಧಿಯವರ ತೇಜೋವಧೆ ಮಾಡುವ ಯತ್ನ ಮಾಡಲಾಗಿದೆ. ಈ ಫೋಟೊ ದಲ್ಲಿ ಸೋನಿಯಾ ಬೀಚ್ ಉಡುಪಿನಲ್ಲಿ ಗಂಡಸೊಬ್ಬರೊಂದಿಗಿದ್ದಾರೆ ಎಂಬ ಚಿತ್ರಣ ಸೃಷ್ಟಿಸುವುದು ಇದರ ಉದ್ದೇಶ. ‘‘ಹಲೋ ಕಾಂಗ್ರೆಸ್ಸಿಗರೇ, ನೋಡಿ ನಿಮ್ಮ ನಾಯಕಿ ಸೋನಿಯಾರ ಅವಸ್ಥೆಯನ್ನು. ಇದೂ ಸುಳ್ಳು ಅಂತೀರಾ?’’ ಎಂದು ‘ಫಿರ್ ಏಕ್ ಬಾರ್ ಮೋದಿ ಸರಕಾರ್’ ಎಂಬ ಬಲಪಂಥೀಯ ಫೇಸ್‌ಬುಕ್ ಪೇಜ್ ಈ ಸಂಚು ರೂಪಿಸಿದೆ. ಇದು 24 ಗಂಟೆಗಳಲ್ಲಿ 10 ಸಾವಿರ ಬಾರಿ ಶೇರ್ ಆಗಿದೆ. ನಕಲಿ ಫೋಟೊ ಇಟ್ಟ್ಟುಕೊಂಡು ‘ದೇಶ ರಕ್ಷಿಸಿ’ ಅಭಿಯಾನ ನಡೆಸುತ್ತಿರುವ ಮುಖೇಡಿ ಗುಂಪುಗಳ ಫೇಸಬುಕ್ ಪೇಜ್‌ಗಳು: ವಿ ಸಪೋರ್ಟ್ ಪಿಎಂ ಮೋದಿ, ವೋಟ್ ಫಾರ್ ಬಿಜೆಪಿ, ವೋಟ್ ಫಾರ್ ಯೋಗಿ ಆದಿತ್ಯನಾಥ್ ಇತ್ಯಾದಿ. ಸತ್ಯ: ಈ ಫೋಟೊದಲ್ಲಿರುವುದು ಸೋನಿಯಾ ಅಲ್ಲವೇ ಅಲ್ಲ. ಮೊದಲ ಜೇಮ್ಸ್ ಬಾಂಡ್ ಚಿತ್ರ ‘Dr. NO’ ಚಲನಚಿತ್ರದ ಸೆಟ್‌ನಲ್ಲಿ ಸ್ವಿಸ್ ನಟಿ ಉರ್ಸುಲಾ ಆ್ಯಂಡ್ರೆಸ್ ನಟನೆಯ ಸ್ಟಿಲ್ ಇವು. ಆಕೆಯ ಜೊತೆಗಿರುವಾತ ಬಾಂಡ್ ಪಾತ್ರ ಮಾಡಿದ ಸ್ಕಾಟಿಷ್ ನಟ ಸಿಯಾನ್ ಕಾನರಿ.
ಸತ್ಯ ಇಷ್ಟು ಸಿಂಪಲ್ಲಾಗಿದೆ. ಇದನ್ನು ಕೆಲವರು ವಿವರಿಸಿದರೂ ಸುಳ್ಳರು ವಿಕೃತ ನಗೆಯಲ್ಲೇ ಕಾಲ ತಳ್ಳುತ್ತಿದ್ದಾರೆ. ಈ ಹಿಂದೆಯೂ ಸೋನಿಯಾ ಗಾಂಧಿ ತೇಜೋವಧೆಗೆ ಸಾಕಷ್ಟು ಯತ್ನ ಮಾಡಲಾಗಿದೆ. ಹಿಂದೆ ಇದೇ ‘ಫಿರ್ ಏಕ್ ಬಾರ್ ಮೋದಿ ಸರಕಾರ್’ ಪೇಜ್‌ನಲ್ಲಿ ಫೋಟೊಶಾಪ್ ಮಾಡಿ ಸೋನಿಯಾ ಮತ್ತು ಮಾಲ್ದಿವ್ಸ್‌ನ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಫೋಟೊ ಹಾಕಲಾಗಿತ್ತು. ಸೋನಿಯಾ ಗಯೂಮ್ ತೊಡೆ ಮೇಲೆ ಕುಳಿತಂತೆ ಫೋಟೊ ಸೃಷ್ಟಿಸಲಾಗಿತ್ತು.
ಹಾಲಿವುಡ್ ನಟಿ ರೀಸ್ ವಿಡರ್‌ಸ್ಪೂನ್ ಫೋಟೊ ಹಾಕಿ, ಸೋನಿಯಾ ಯುವತಿಯಾಗಿದ್ದಾಗ ಬಾರ್ ವೇಟ್ರೆಸ್ ಆಗಿದ್ದರು ಎಂದು ಸುಳ್ಳು ಸುದ್ದಿ ಹರಡಲಾಗಿತ್ತು. ಮರ್ಲಿನ್ ಮನ್ರೋ ಫೋಟೊಕ್ಕೆ ಸೋನಿಯಾ ಮುಖ ಪೇಸ್ಟ್ ಮಾಡಿ, ಬಾರ್‌ಗರ್ಲ್ ಸೋನಿಯಾ ಎಂದು ತಿರುಚಲಾಗಿತ್ತು.
ಸೋನಿಯಾ ಈಗ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಈಗಲೂ ಅವರ ವಿರುದ್ಧ ವಿಕೃತ ಸುಳ್ಳುಗಳನ್ನು ಹರಡಲಾಗುತ್ತಿದೆ. ಈ ವಿಕೃತರ ಮಾಡೆಲ್‌ಗಳೇ ಸಾರ್ವಜನಿಕ ಸಭೆಗಳಲ್ಲೇ ಸುಳ್ಳುಗಳನ್ನು ಸತ್ಯ ಎಂಬಂತೆ ಕಿರುಚುವಾಗ ಇನ್ನೇನಾಗುತ್ತದೆ?

Writer - -ಪಿ.ಕೆ. ಮಲ್ಲನಗೌಡರ್

contributor

Editor - -ಪಿ.ಕೆ. ಮಲ್ಲನಗೌಡರ್

contributor

Similar News