ಟಿಪ್ಪು ಸುಲ್ತಾನ್ ಭಾವಚಿತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನಾವರಣಗೊಳಿಸಿದರೇ?

Update: 2018-06-19 07:40 GMT
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೊ

“ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಭಾವಚಿತ್ರವನ್ನು ಅನಾವರಣಗೊಳಿಸಿದ್ದಾರೆ” ಎನ್ನುವ ತಲೆಬರಹದಡಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ಗಳಲ್ಲಿ ಫೋಟೊವೊಂದು ವೈರಲ್ ಆಗುತ್ತಿದೆ.

ನೀಲಿ ಸೂಟು ಧರಿಸಿ, ಪೇಟ ತೊಟ್ಟಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟಿಪ್ಪು ಭಾವಚಿತ್ರವನ್ನು ಹಿಡಿದು ನಿಂತಿರುವುದನ್ನು ಫೊಟೊದಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ, ಅದರ ದುರ್ಬಳಕೆಯೂ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸುಳ್ಳುಗಳನ್ನು ಹರಡಲು ಸಾಮಾಜಿಕ ಜಾಲತಾಣಗಳು ಅತ್ಯಂತ ಸುಲಭ ಮಾರ್ಗವಾಗಿದೆ ಹಾಗು ಇದರಲ್ಲಿ ಬರುವ ಯಾವುದೇ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸದೆ ನಂಬುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಟಿಪ್ಪು ಭಾವಚಿತ್ರವನ್ನು ರಾಷ್ಟ್ರಪತಿ ಅನಾವರಣಗೊಳಿಸದರೇ ಎಂದು ತಿಳಿಯಲು varthabharati.in ಈ ಬಗ್ಗೆ ‘ಫ್ಯಾಕ್ಟ್ ಚೆಕ್’ ನಡೆಸಿತು. ಗೂಗಲ್ ಮೂಲಕ ಟಿಪ್ಪು ಫೋಟೊದ ಆಧಾರದಲ್ಲಿ ಹುಡುಕಾಟ ನಡೆಸಿದಾಗ ಇದು ಫೋಟೊಶಾಪ್ ಎಡಿಟೆಡ್ ಫೋಟೊ ಎನ್ನುವುದು ಸ್ಪಷ್ಟಗೊಂಡಿದೆ.

ಶಿವಾಜಿ ಜಯಂತಿ ಸಂದರ್ಭ ಅಖಿಲ ಭಾರತೀಯ ಶಿವರಾಜ್ಯಾಭಿಷೇಕ್ ಮಹೋತ್ಸವ್ ಸಮಿತಿ ಹೊಸದಿಲ್ಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶಿವಾಜಿ ಭಾವಚಿತ್ರವನ್ನು ಹಿಡಿದುಕೊಂಡಿದ್ದರು. ಈ ಫೋಟೊ ಸುದ್ದಿಗಳಲ್ಲೂ ಪ್ರಕಟವಾಗಿತ್ತು. ಇದನ್ನೇ ತಿರುಚಿದ ಕಿಡಿಗೇಡಿಗಳು ಶಿವಾಜಿ ಬದಲಿಗೆ ಟಿಪ್ಪು ಸುಲ್ತಾನ್ ಭಾವಚಿತ್ರವನ್ನು ಫೋಟೊಶಾಪ್ ಎಡಿಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳು ಮಾಹಿತಿ, ಸುದ್ದಿ ಪ್ರಸಾರಕ್ಕೆ ಸುಲಭ ಮಾಧ್ಯಮವಾಗಿದೆಯೋ ಅಷ್ಟೋ ಸುಲಭವಾಗಿ ಇದರಲ್ಲಿ ಸುಳ್ಳನ್ನೂ ಹರಡಬಹುದು. ಬಳಕೆದಾರರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News