ಜನರ ತಲೆಯಲ್ಲಿ ದ್ವೇಷ ತುಂಬಿಸುವುದು ದೇಶಭಕ್ತಿಯಲ್ಲ : ಕವಿತಾ ಲಂಕೇಶ್

Update: 2018-06-19 07:35 GMT

ಬೆಂಗಳೂರು, ಜೂ. 19: ತಮ್ಮ ಸೋದರಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಆರು ಮಂದಿಯ ಬಂಧನದೊಂದಿಗೆ ಈ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬರಬಹುದೆನ್ನುವ ವಿಶ್ವಾಸವನ್ನು ಕವಿತಾ ಲಂಕೇಶ್ ವ್ಯಕ್ತಪಡಿಸಿದ್ದಾರಲ್ಲದೆ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಹಾಗೂ ಎಂಎಂ ಕಲಬುರ್ಗಿ ಪ್ರಕರಣಗಳತ್ತವೂ ಅದು ಬೆಳಕು ಚೆಲ್ಲಬಹುದು ಎಂದಿದ್ದಾರೆ.

ಪ್ರಕರಣದಲ್ಲಿ ಕೊನೆಗೆ ಬಂಧಿಸಲ್ಪಟ್ಟ ಆರೋಪಿ 26 ವರ್ಷದ ಪರಶುರಾಮ್ ವಾಗ್ಮೋರೆ ಗೌರಿ ಅವರಿಗೆ ಗುಂಡಿಕ್ಕಿದವನೆಂದು ಪೊಲೀಸರೀಗಾಗಲೇ ಹೇಳಿದ್ದಾರೆ. ಆತನ ಬಗ್ಗೆ ಮಾತನಾಡುತ್ತಾ ‘‘ಕೆಲವೊಮ್ಮೆ ತೀರಾ ದ್ವೇಷ ಹುಟ್ಟುತ್ತದೆ, ಮತ್ತೆ ಕೆಲವೊಮ್ಮ ತುಂಬಾ ಅನುಕಂಪದ ಭಾವನೆ ಮೂಡುತ್ತದೆ’’ ಎಂದಿದ್ದಾರೆ ಕವಿತಾ.

ಆತನಂತಹ ಯುವಕರನ್ನು ಬ್ರೈನ್ ವಾಶ್ ಮಾಡಿದ ಜನರನ್ನು ಇಂತಹ ಕೃತ್ಯಕ್ಕೆ ಆಕೆ ದೂರಿದ್ದಾರೆ. ‘‘ಜನರ ತಲೆಯಲ್ಲಿ ದ್ವೇಷ ತುಂಬಿಸುವುದು ದೇಶಭಕ್ತಿಯಲ್ಲ, ಕೊಲೆಗಾರರು ನಿರುದ್ಯೋಗಿಗಳು ಹಾಗೂ ಪರಶುರಾಮ್ ನಂತಹ ಸಮಾಜದ ಕೆಳ ಸ್ತರದ ಜನರು. ಸೇನೆಯಲ್ಲಿದ್ದುಕೊಂಡು ದೇಶಕ್ಕಾಗಿ ಹೋರಾಡಿದಂತಹ ಭಾವನೆ ಅವರಲ್ಲಿ ಬೆಳೆಸಲು ಯತ್ನಿಸುತ್ತಿದ್ದಾರೆ. ಆತ ಏನು ಮಾಡುತ್ತಿದ್ದನೆಂಬ ಬಗ್ಗೆ ಆತನ ಹೆತ್ತವರಿಗೆ ಖಂಡಿತಾ ತಿಳಿದಿರಲಿಕ್ಕಿಲ್ಲ. ಆತ ನಂಬಿಕೆಯ ವ್ಯಕ್ತಿ ಎಂದು ಅವರು ತಿಳಿದಿದ್ದಿರಬಹುದು. ‘‘ಜನರ ಮನಸ್ಸುಗಳಲ್ಲಿ ವಿಷ ತುಂಬಿಸುವವರಲ್ಲಿ ಪ್ರಮೋದ್ ಮುತಾಲಿಕ್ ಕೂಡ ಒಬ್ಬರು. ಅವರ ನಾಯಿ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ’’ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.

‘‘ನನಗೆ ಸಿಟ್ಟು ಬಂದಿದೆ ಹಾಗೂ ಅವರನ್ನು ದೂಷಿಸಬೇಕೆಂದೆನಿಸುತ್ತದೆ ಆದರೆ ಅವರಂತಹವರಿಗೆ ನನ್ನ ಸಮಯ ಹಾಗೂ ಕೋಪಕ್ಕೆ ಅರ್ಹತೆಯಿಲ್ಲ. ಅವರು ಪ್ರಾಣಿಗಳಂತೆ ವರ್ತಿಸುತ್ತಿದ್ದಾರೆಂದೂ ಹೇಳಲು ಸಾಧ್ಯವಿಲ್ಲ. ಯಾವುದೇ ಪ್ರಾಣಿ ಕೂಡ ಇಷ್ಟು ವಿಷಕಾರಿಯಲ್ಲ’’ ಎಂದು ಕವಿತಾ ಅಭಿಪ್ರಾಯ ಪಟ್ಟರು.

ಇಂತಹ ಹೇಳಿಕೆ ನೀಡುವವರನ್ನು ‘ಒಳಕ್ಕೆ ಹಾಕಬೇಕು,’ ಸಣ್ಣಪುಟ್ಟ ಸಂಘಟನೆಗಳೆಲ್ಲ ಸಣ್ಣಪುಟ್ಟ ಆಗಿ ಉಳಿದಿಲ್ಲ, ವಾಕ್ ಸ್ವಾತಂತ್ರ್ಯಕ್ಕೂ ಕೆಲವೊಂದು ಜವಾಬ್ದಾರಿಗಳಿವೆ. ಅವರು ಯುವ ಜನರ ಮೇಲೆ ಪ್ರಭಾವ ಬೀರಿ ‘ಹೋಗಿ ಕೊಲೆ ಮಾಡಿ’ ಎನ್ನುತ್ತಿದ್ದಾರೆ’’ ಎಂದರು ಕವಿತಾ ‘‘ನಾವೆಲ್ಲರೂ ಹಿಂದೂ ಧರ್ಮವನ್ನು ಪ್ರೀತಿಸುತ್ತೇವೆ. ಅದು ಕೊಲೆಗಳಲ್ಲಿ ನಂಬಿಕೆಯಿರಿಸಿಲ್ಲ’’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News