ಆದಾಯ ತೆರಿಗೆ ರಿಟರ್ನ್ ಸಲ್ಲಿಸುತ್ತೀರಾ?: ನೆನಪಿರಲಿ, ಈ ಹತ್ತು ದಾಖಲೆಗಳು ಕಡ್ಡಾಯ

Update: 2018-06-19 13:46 GMT

2018-19ನೇ ತೆರಿಗೆ ವರ್ಷದ ಆದಾಯ ತೆರಿಗೆ ರಿಟರ್ನ್(ಐಟಿಆರ್) ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು,ಜುಲೈ 31 ಇದಕ್ಕೆ ಅಂತಿಮ ದಿನವಾಗಿದೆ. ಇದರೊಂದಿಗೆ ತೆರಿಗೆದಾತರ ರಕ್ತದೊತ್ತಡ ಹೆಚ್ಚುತ್ತಿದೆ. ಆದಾಯ ತೆರಿಗೆ ನೇರ ತೆರಿಗೆಯಾಗಿದ್ದು,ಅದನ್ನು ತೆರಿಗೆದಾತ ನೇರವಾಗಿ ಸರಕಾರಕ್ಕೆ ಪಾವತಿಸಬೇಕಾಗುತ್ತದೆ. ತೆರಿಗೆಗೆ ಅರ್ಹ ಆದಾಯವನ್ನು ಹೊಂದಿರುವವರು ತೆರಿಗೆಯನ್ನು ಪಾವತಿಸುವುದು ಕಡ್ಡಾಯವಾಗಿದೆ. ಐಟಿಆರ್ ನಿಮ್ಮ ಆದಾಯದ ದಾಖಲೀಕೃತ ಪುರಾವೆಯಾಗಿರು ವುದರಿಂದ ಅದರ ಸಲ್ಲಿಕೆಯೂ ಮುಖ್ಯವಾಗಿದೆ. ಆದರೆ ಕೆಲವು ದಾಖಲೆಗಳಿಲ್ಲದೆ ನೀವು ಐಟಿಆರ್‌ನ್ನು ಸಲ್ಲಿಸಲು ಸಾಧ್ಯವಿಲ್ಲ. ಐಟಿಆರ್ ಸಲ್ಲಿಕೆಗೆ ಅಗತ್ಯವಾಗಿರುವ ಹತ್ತು ಮಹತ್ವದ ದಾಖಲೆಗಳು ಹೀಗಿವೆ....

1)ಪಾನ್ ಕಾರ್ಡ್

ಪಾನ್ ಆದಾಯ ತೆರಿಗೆ ಇಲಾಖೆಯು ನೀಡುವ ಕಾಯಂ ಖಾತೆ ಸಂಖ್ಯೆಯಾಗಿದೆ. ಪಾನ್‌ಕಾರ್ಡ್‌ನಲ್ಲಿ ನಿಮ್ಮ ಹೆಸರು,ತಂದೆಯ ಹೆಸರು,ಜನ್ಮ ದಿನಾಂಕ ಮತ್ತು ಪಾನ್ ನಂ.ಇತ್ಯಾದಿ ಪ್ರಾಥಮಿಕ ಮಾಹಿತಿಗಳಿರುತ್ತವೆ. ಐಟಿಆರ್ ಸಲ್ಲಿಸಲು ಪಾನ್ ಕಾರ್ಡ್ ಕಡ್ಡಾಯವಾಗಿದೆ.

2) ಆಧಾರ್ ಕಾರ್ಡ್

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನೀಡುವ ಆಧಾರ್ ಕಾರ್ಡ್ ನಿಮ್ಮ ಹೆಸರು,ಜನ್ಮ ದಿನಾಂಕ,ವಿಳಾಸ ಮತ್ತು 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಐಟಿಆರ್ ಸಲ್ಲಿಕೆಗೆ ಆಧಾರ ವಿವರಗಳು ಅಗತ್ಯವಾಗಿವೆ.

3) ವೇತನ ಚೀಟಿಗಳು

ವೇತನ ಚೀಟಿಯು ವ್ಯಕ್ತಿಯ ಮೂಲ ವೇತನ,ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್) ಮೊತ್ತ,ಇತರ ಕಡಿತಗಳು,ತುಟ್ಟಿಭತ್ಯೆ,ಮನೆಬಾಡಿಗೆ ಭತ್ಯೆ,ಪ್ರಯಾಣ ಭತ್ಯೆ,ಇತರ ಭತ್ಯೆಗಳು ಇತ್ಯಾದಿ ವಿವರಗಳನ್ನೊ ಳಗೊಂಡಿದ್ದು,ಇವು ಐಟಿಆರ್ ಸಲ್ಲಿಕೆಯಲ್ಲಿ ಮುಖ್ಯವಾಗಿವೆ.

4) ಫಾರ್ಮ್ ನಂ.16

ಟಿಡಿಎಸ್ ಪ್ರಮಾಣಪತ್ರವಾಗಿರುವ ಫಾರ್ಮ್ ನಂ.16 ಉದ್ಯೋಗದಾತ ತನ್ನ ಉದ್ಯೋಗಿಗೆ ಒದಗಿಸುವ ದಾಖಲೆಯಾಗಿದೆ. ಅದು ಉದ್ಯೋಗಿಯ ವೇತನದಲ್ಲಿಯ ವಿಭಜನೆಗಳು ಮತ್ತು ಅದರ ಮೇಲೆ ಕಡಿತಗೊಳಿಸಲಾದ ಟಿಡಿಎಸ್‌ನ ಎಲ್ಲ ವಿವರಗಳನ್ನು ಒಳಗೊಂಡಿರುತ್ತದೆ. ವೇತನದಾರ ಉದ್ಯೋಗಿಗಳು ಐಟಿಆರ್ ಸಲ್ಲಿಸಲು ಇದು ಪ್ರಮುಖವಾದ ದಾಖಲೆಯಾಗಿದೆ. ಅದು ಉದ್ಯೋಗದಾತನ ಟ್ಯಾನ್ ಮತ್ತು ಪಾನ್ ಸಂಖ್ಯೆಗಳನ್ನೂ ಒಳಗೊಂಡಿರುತ್ತದೆ.

5) ಫಾರ್ಮ್ ನಂ.26ಎಎಸ್

ಇದು ಆಟೊ-ಜನರೇಟೆಡ್ ವಾರ್ಷಿಕ ತೆರಿಗೆ ದಾಖಲೆಯಾಗಿದ್ದು,ನಿಮ್ಮ ಪಾನ್‌ಗೆ ಸಂಬಂಧಿಸಿದಂತೆ ಆ ಹಣಕಾಸು ವರ್ಷದಲ್ಲಿ ನಿಮ್ಮ ಆದಾಯದ ಮೇಲೆ ಕಡಿತಗೊಂಡ ತೆರಿಗೆಯ ವಿವರಗಳನ್ನು ಒಳಗೊಂಡಿರುತ್ತದೆ. ಆದಾಯ ತೆರಿಗೆ ಇಲಾಖೆಯ (TRACES) ಜಾಲತಾಣದಲ್ಲಿ ನಿಮ್ಮ ಫಾರ್ಮ್ ನಂ.26ಎಎಸ್‌ನ್ನು ನೋಡಬಹುದು ಮತ್ತು ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

6) ಬ್ಯಾಂಕುಗಳು ಮತ್ತು ಅಂಚೆ ಕಚೇರಿಯಿಂದ ಬಡ್ಡಿ ಪ್ರಮಾಣಪತ್ರ

ನೀವು ಹೊಂದಿರುವ ಯಾವುದೇ ಬ್ಯಾಂಕ್ ಉಳಿತಾಯ ಖಾತೆ,ಅಂಚೆ ಕಚೇರಿ ಉಳಿತಾಯ ಖಾತೆ,ಎಫ್‌ಡಿ ಅಥವಾ ಆರ್‌ಡಿಗಳ ಮೇಲೆ ಗಳಿಸುವ ಬಡ್ಡಿಯು ತೆರಿಗೆಗೊಳಪಡುತ್ತದೆ. ಹೀಗಾಗಿ ನಿಮ್ಮ ವೇತನದಲ್ಲಿ ಟಿಡಿಎಸ್ ಆಗಿರದಿದ್ದರೆ ನೀವು ಒಟ್ಟು ಎಷ್ಟು ಬಡ್ಡಿಯನ್ನು ಗಳಿಸಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲು ಬ್ಯಾಂಕುಗಳು ಅಥವಾ ಅಂಚೆ ಕಚೇರಿಯಿಂದ ಬಡ್ಡಿ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

7) ತೆರಿಗೆ ಉಳಿತಾಯ ಪುರಾವೆಗಳು

2017-18ನೇ ಹಣಕಾಸಿನ ವರ್ಷದಲ್ಲಿ ಸೆಕ್ಷನ್ 80ಸಿ,80ಸಿಸಿಸಿ ಮತ್ತು 80ಸಿಸಿಡಿ(1) ಇವುಗಳ ಅಡಿ ನೀವು ಮಾಡಿರುವ ಹೂಡಿಕೆಗಳು ಮತ್ತು ವೆಚ್ಚಗಳು ನಿಮ್ಮ ತೆರಿಗೆ ಹೊರೆಯನ್ನು ತಗ್ಗಿಸುತ್ತವೆ. ನೌಕರರ ಭವಿಷ್ಯನಿಧಿ, ಸಾರ್ವಜನಿಕ ಭವಿಷ್ಯನಿಧಿ,ಮ್ಯೂಚ್ಯುವಲ್ ಫಂಡ್‌ಗಳ ಇಎಲ್‌ಎಸ್‌ಎಸ್ ಯೋಜನೆಗಳು,ಎಲ್‌ಐಸಿ ಕಂತುಗಳು,ರಾಷ್ಟ್ರೀಯ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆಗಳು ನಿಮಗೆ ತೆರಿಗೆಯನ್ನು ಉಳಿಸುತ್ತವೆ.

8) ಸೆಕ್ಷನ್ 80ಡಿಯಿಂದ ಸೆಕ್ಷನ್ 80ಅಡಿ ಕಡಿತಗಳು

ಸೆಕ್ಷನ್ 80ಸಿ ಅಡಿ ನಿಮ್ಮ ಹೂಡಿಕೆಗಳು ಮತ್ತು ವೆಚ್ಚಗಳ ಹೊರತಾಗಿ ಸದ್ರಿ ಹಣಕಾಸು ವರ್ಷದಲ್ಲಿ ನೀವು ಮಾಡಿರುವ ವಿವಿಧ ಹೂಡಿಕೆಗಳು ಮ್ತು ವೆಚ್ಚಗಳಿಗಾಗಿ ಸೆಕ್ಷನ್ 80ಡಿಯಿಂದ ಸೆಕ್ಷನ್ 80ಯು ಅಡಿ ನೀವು ತೆರಿಗೆ ರಿಯಾಯಿತಿಯನ್ನು ಕೋರಬಹುದು. ಉದಾಹರಣೆಗೆ 2017-18ನೇ ಸಾಲಿನಲ್ಲಿ ನೀವು ಆರೋಗ್ಯ ವಿಮೆ ಪ್ರೀಮಿಯಂ ಪಾವತಿಸಿದ್ದರೆ ಅದು ಸೆಕ್ಷನ್ 80ಡಿ ಅಡಿ ತೆರಿಗೆ ರಿಯಾಯಿತಿಗೆ ಅರ್ಹವಾಗುತ್ತದೆ.

9) ಗೃಹಸಾಲದ ಸ್ಟೇಟ್‌ಮೆಂಟ್

ಅಧಿಕೃತ ಹಣಕಾಸು ಸಂಸ್ಥೆಯಿಂದ ಗೃಹಸಾಲವನ್ನು ಪಡೆದಿದ್ದರೆ ನೀವು ಸೆಕ್ಷನ್ 24 ಮತ್ತು ಸೆಕ್ಷನ್ 80ಸಿ ಅಡಿ ತೆರಿಗೆ ರಿಯಾಯಿತಿಯನ್ನು ಪಡೆಯಬಹುದು. ಆದರೆ ಇದಕ್ಕಾಗಿ ಐಟಿಆರ್ ಜೊತೆಗೆ ಗೃಹಸಾಲ ಸ್ಟೇಟ್‌ಮೆಂಟ್‌ನ್ನು ಅಗತ್ಯವಾಗಿ ಲಗತ್ತಿಸಬೇಕು.

10) ಬಂಡವಾಳ ಗಳಿಕೆ

ಆಸ್ತಿ ಅಥವಾ ಶೇರುಗಳು ಅಥವಾ ಮ್ಯೂಚ್ಯುವಲ್ ಫಂಡ್‌ಗಳ ಮಾರಾಟದಿಂದ ಯಾವುದೇ ಬಂಡವಾಳ ಗಳಿಕೆಯಿದ್ದರೆ ಅದನ್ನು ದಾಖಲೆಯ ರೂಪದಲ್ಲಿ ಸಲ್ಲಿಸಬೇಕು ಮತ್ತು ನಿಮ್ಮ ಐಟಿಆರ್‌ನಲ್ಲಿ ತೋರಿಸಬೇಕು.
  

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News