ವಾಗ್ಮೊರೆಯ ಕಸ್ಡಡಿ ಕೇಳುವ ಬಗ್ಗೆ ಚಿಂತನೆ ನಡೆಸಿಲ್ಲ: ಮಹಾರಾಷ್ಟ್ರ ಎಸ್‌ಐಟಿ

Update: 2018-06-19 16:15 GMT

ಮುಂಬೈ, ಜೂ.19: ಪತ್ರಕರ್ತೆ ಗೌರಿ ಲಂಕೇಶ್ ಹತ್ಯಾ ಆರೋಪಿ ಪರಶುರಾಮ್ ವಾಗ್ಮೊರೆಯನ್ನು ವಶಕ್ಕೆ ಕೇಳುವ ಯಾವುದೇ ಯೋಚನೆ ಸದ್ಯಕ್ಕಿಲ್ಲ ಎಂದು ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರದ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ತಿಳಿಸಿದೆ.

ಸದ್ಯಕ್ಕಂತೂ ಅಂಥ ಯಾವುದೇ ಯೋಚನೆಯಿಲ್ಲ. ಆದರೆ ತನಿಖೆ ಮುಂದುವರಿದಂತೆ ಆತನ ಕಸ್ಟಡಿಯನ್ನು ಕೇಳುವ ಸಾಧ್ಯತೆಯಿದೆ ಎಂದು ಸಿಟ್ ಅಧಿಕಾರಿಗಳು ತಿಳಿಸಿದ್ದಾರೆ. ಗೌರಿ ಲಂಕೇಶ್ ಹತ್ಯಾ ಆರೋಪದಲ್ಲಿ ಕರ್ನಾಟಕ ಎಸ್‌ಐಟಿ ಶ್ರೀರಾಮ ಸೇನೆಯ ಸಕ್ರಿಯ ಸದಸ್ಯ ಪರಶುರಾಮ್ ವಾಗ್ಮೊರೆ ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಗೌರಿ ಲಂಕೇಶ್, ಗೋವಿಂದ ಪನ್ಸಾರೆ ಹಾಗೂ ಪ್ರಗತಿಪರ ಚಿಂತಕ ಎಂ.ಎಂ ಕಲಬುರ್ಗಿಯನ್ನು ಹತ್ಯೆ ಮಾಡಲು ಒಂದೇ ರೀತಿಯ ಆಯುಧವನ್ನು ಬಳಸಲಾಗಿದೆ ಎಂದು ವಿಧಿವಿಜ್ಞಾನ ವರದಿಯು ತಿಳಿಸಿದೆ. ಆದರೆ ಈ ಆಯುಧ ಇನ್ನಷ್ಟೇ ಪೊಲೀಸರ ಕೈಸೇರಬೇಕಿದೆ. ಪನ್ಸಾರೆ ಟೋಲ್ ತೆರಿಗೆ ವಿರುದ್ಧ ಹೋರಾಟ ನಡೆಸುತ್ತಿದ್ದರು. ಅವರನ್ನು 2015ರ ಫೆಬ್ರವರಿ 16ರಂದು ಮಹಾರಾಷ್ಟ್ರದ ಕೋಲಾಪುರ ನಗರದಲ್ಲಿ ಬೈಕ್‌ನಲ್ಲಿ ಆಗಮಿಸಿದ ಆಗಂತುಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

ಪನ್ಸಾರೆ ಕೊಲೆಗಾರರನ್ನು ಪತ್ತೆ ಮಾಡುವಲ್ಲಿ ಮಹಾರಾಷ್ಟ್ರ ಎಸ್‌ಐಟಿ ಇದುವರೆಗೆ ಯಶಸ್ವಿಯಾಗಿಲ್ಲ. ಕರ್ನಾಟಕ ಸಿಟ್ ವಾಗ್ಮೊರೆಯನ್ನು ಬಂಧಿಸುವ ಮೂಲಕ ಮಹಾರಾಷ್ಟ್ರ ಸಿಟ್‌ಗೂ ಈ ಪ್ರಕರಣದಲ್ಲಿ ಮೊದಲ ಸುಳಿವು ಲಭ್ಯವಾಗಿದೆ. ಆದರೆ ಪನ್ಸಾರೆ ಹಾಗೂ ಕಲಬುರ್ಗಿ ಹತ್ಯೆಯಲ್ಲಿ ವಾಗ್ಮೊರೆ ಪಾತ್ರವನ್ನು ಕರ್ನಾಟಕ ಸಿಟ್ ತಳ್ಳಿಹಾಕಿದೆ. ಕನ್ನಡ ಸಾಹಿತಿ ಕೆ.ಎಸ್ ಭಗವಾನ್‌ರನ್ನು ಹತ್ಯೆ ಮಾಡಲೂ ಈ ಗುಂಪು ಯೋಜನೆ ರೂಪಿಸಿತ್ತು ಎಂದು ಸಿಟ್ ತಿಳಿಸಿದೆ. ಕರ್ನಾಟಕ ಎಸ್‌ಐಟಿ ಪ್ರಕಾರ ಈ ಗುಂಪು ಕನಿಷ್ಟ ಐದು ರಾಜ್ಯಗಳಲ್ಲಿ ವ್ಯಾಪಿಸಿದ್ದು ಬಲಪಂಥೀಯ ಚಿಂತನೆಯ 60 ಮಂದಿ ಇದರ ಭಾಗವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News