ಮುಂದಿನ ವರ್ಷ ಈ ರಾಜ್ಯದಲ್ಲಿ ವಿದ್ಯಾರ್ಥಿಗಳಿಂದ ಚಂದ್ರಯಾನ

Update: 2018-06-19 16:53 GMT

ಚೆನ್ನೈ, ಜೂ.19: ವಿಶ್ವದಲ್ಲೇ ಪ್ರಪ್ರಥಮ ಎನ್ನಲಾಗಿರುವ ವಿದ್ಯಾರ್ಥಿಗಳ ಚಂದ್ರಯಾನವು ಮುಂದಿನ ವರ್ಷಾಂತ್ಯದೊಳಗೆ ನಡೆಯಲಿದ್ದು ಈ ಮಹಾತ್ವಾಕಾಂಕ್ಷೆಯ ಖಾಸಗಿ ಚಂದ್ರಯಾನ ಸಾಹಸಕ್ಕೆ ಸುಮಾರು 250ರಿಂದ 300 ಕೋಟಿ ರೂ.ಗಳಷ್ಟು ವೆಚ್ಚವಾಗಲಿದೆ ಎಂದು ವರದಿಯಾಗಿದೆ.

 2017ರ ಜೂನ್‌ನಲ್ಲಿ ನಾಸಾ ಉಡಾಯಿಸಿದ 64 ಗ್ರಾಂ ತೂಕದ ‘ಕಲಾಮ್‌ಸ್ಯಾಟ್’ ಉಪಗ್ರಹವನ್ನು ರೂಪಿಸಿದ ವಿದ್ಯಾರ್ಥಿಗಳ ತಂಡವೇ ಈ ವಿದ್ಯಾರ್ಥಿಗಳ ಚಂದ್ರಯಾನದ ಪರಿಕಲ್ಪನೆಯನ್ನು ರೂಪಿಸಿದೆ. ವಿದ್ಯಾರ್ಥಿಗಳಲ್ಲಿ ತಾವು ಕೂಡಾ ಚಂದ್ರನನ್ನು ತಲುಪಬಲ್ಲೆವು ಎಂಬ ಆತ್ಮವಿಶ್ವಾಸದ ಭಾವನೆ ಬೆಳೆಸುವ ಉದ್ದೇಶದಿಂದ ಈ ಯಾನವನ್ನು ಸಂಯೋಜಿಸಲಾಗಿದೆ ಎಂದು ‘ಸ್ಪೇಸ್‌ಕಿಡ್ಸ್’ ಚಂದ್ರಯಾನ ಯೋಜನೆಯ ನಿರ್ದೇಶಕಿ , ಚೆನ್ನೈ ಮೂಲದ ಶ್ರೀಮತಿ ಕೇಶನ್ ತಿಳಿಸಿದ್ದಾರೆ.

ಭಾರತೀಯ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಬೆಳೆಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ‘ಸ್ಪೇಸ್‌ಕಿಡ್ಸ್’ ನ ಸಿಇಒ ಕೂಡಾ ಆಗಿರುವ ಕೇಶನ್, 3ಡಿ ತಂತ್ರಜ್ಞಾನ ಹೊಂದಿರುವ ಸುಮಾರು 3 ಕಿ.ಗ್ರಾಂ. ತೂಕದ ವಾಹನದ ಮೂಲಕ ಚಂದ್ರಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಜೂನ್ 16ರಂದು ಮುಂಬೈಯ ಐಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಗುರ ತೂಕದ ರೋವರ್ ವಾಹನದ ಮೂಲ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು. ವಿನ್ಯಾಸದ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದ ಬಳಿಕ ಉಡ್ಡಯನಾ ವಾಹನದ ಕುರಿತು ಸ್ಪಷ್ಟ ಪರಿಕಲ್ಪನೆ ಮೂಡಲಿದೆ . ಇದಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ದಾನಿಗಳಿಂದ ಸಂಗ್ರಹಿಸುವ ವಿಶ್ವಾಸವಿದೆ ಎಂದವರು ತಿಳಿಸಿದರು.

ಇಸ್ರೋ ಸಂಸ್ಥೆಯು ಚಂದ್ರಯಾನ-2 ಯೋಜನೆಯನ್ನು ಹಮ್ಮಿಕೊಂಡಿರುವ ಸಂದರ್ಭದಲ್ಲೇ ವಿದ್ಯಾರ್ಥಿಗಳ ಚಂದ್ರಯಾನ ಯೋಜನೆ ಯೋಜಿಸಿರುವ ಬಗ್ಗೆ ಉತ್ತರಿಸಿದ ಶ್ರೀಮತಿ ಕೇಶನ್, ಇಸ್ರೋ ಹಮ್ಮಿಕೊಂಡಿರುವುದು ಸರಕಾರೀ ಯೋಜನೆಯಾಗಿದೆ. ಆದರೆ ನಮ್ಮದು ಖಾಸಗಿ ಯೋಜನೆ. ಭಾರತದ ಮಕ್ಕಳೂ ಇದನ್ನು ಮಾಡಬಹುದು ಮತ್ತು ಅವರು ಬೆಳೆದಂತೆಲ್ಲಾ ಮಹತ್ತರ ಸಾಧನೆ ಮಾಡುತ್ತಾರೆ ಎಂಬುದನ್ನು ವಿಶ್ವಕ್ಕೆ ಸಾರಿ ಹೇಳುವ ಉದ್ದೇಶ ತಮ್ಮದಾಗಿದೆ . ವಿದ್ಯಾರ್ಥಿಗಳ ಚಂದ್ರಯಾನ ವಿಶ್ವದಲ್ಲೇ ಪ್ರಥಮ ಯೋಜನೆಯಾಗಿದೆ ಎಂದರು. ವಿಶ್ವದಾದ್ಯಂತದ ಆಸಕ್ತರನ್ನು ಒಟ್ಟುಗೂಡಿಸಿ ಅವರಿಗೆ ಚಂದ್ರಯಾನಕ್ಕೆ ಖಾಸಗಿಯಾಗಿ ಅವಕಾಶ ಮಾಡಿಕೊಡುವ ಗೂಗಲ್‌ನ ಲೂನಾರ್ -ಎಕ್ಸ್ ಪೈಝ್ ಯೋಜನೆಯಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿದವರಲ್ಲಿ ಭಾರತದ ವಿಜ್ಞಾನಿಗಳ ತಂಡವಾದ ‘ಸ್ಪೇಸ್‌ಕಿಡ್ಸ್’ ಅತೀ ಕಿರಿಯರು ಎಂದು ಪರಿಗಣಿಸಲ್ಪಟ್ಟಿತ್ತು. ಆದರೆ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಕೇಶನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News