ದೇವಳ ಮುಖ್ಯಸ್ಥನಿಗೆ ಸಚಿವ ಸ್ಥಾನಮಾನ ನೀಡಿದ ಫಡ್ನವೀಸ್ ಸರಕಾರ

Update: 2018-06-20 06:42 GMT

ಮುಂಬೈ, ಜೂ.20: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಿಂತ ಮೊದಲ ಕೊನೆಯ ಸಂಪುಟ ಪುನರ್ರಚನೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಮುಂಬೈಯ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ  ಆದೇಶ್ ಬಂಡೇಕರ್ ಅವರಿಗೆ ಕಿರಿಯ ಸಚಿವ ಸ್ಥಾನಮಾನ ನೀಡಿದ್ದಾರೆ. ಶಿವಸೇನೆಯ ನಾಯಕರಾಗಿರುವ ಆದೇಶ್ ಜನಪ್ರಿಯ ಮರಾಠಿ ಟಿವಿ ಶೋ ಆಂಕರ್ ಆಗಿದ್ದಾರಲ್ಲದೆ ಇನ್ನು ಮುಂದೆ ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಸಹಾಯಕ ಸಚಿವ ಸ್ಥಾನಮಾನ ಪಡೆಯಲಿದ್ದಾರೆ.

"ನಾನು ಸಚಿವ ಸ್ಥಾನದೊಂದಿಗೆ ಬರುವ ಯಾವುದೇ ಸಂಭಾವನೆ ಸ್ವೀಕರಿಸುವುದಿಲ್ಲ. ಕೇವಲ ಜನರ ಸೇವೆ ಮಾಡಲು ಬಯಸುತ್ತೇನೆ. ಈ ಸಚಿವ ಸ್ಥಾನಮಾನ ವ್ಯಕ್ತಿಯೊಬ್ಬನಿಗೆ ನೀಡಲಾಗಿಲ್ಲ, ಬದಲಾಗಿ ನಾನಿರುವ  ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಅಧ್ಯಕ್ಷರ ಹುದ್ದೆಗೆ ನೀಡಲಾಗಿದೆ'' ಎಂದು ಬಂಡೇಕರ್ ಹೇಳಿದ್ದಾರೆ.

ಸರಕಾರದ ಈ ಯತ್ನ ಶಿವಸೇನೆಯನ್ನು ಓಲೈಸುವ ಯತ್ನ ಎಂದು ವಿಪಕ್ಷಗಳು ಪರಿಗಣಿಸಿವೆ. ಬಂಡೇಕರ್ ಅವರು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಸಮೀಪವರ್ತಿಯಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಲ ಮೂಲಗಳು ತಿಳಿಸಿವೆ.

ಪಾಲ್ಘರ್ ಉಪಚುನಾವಣೆಯ ಮುನ್ನ ಮುಖ್ಯಮಂತ್ರಿ ಫಡ್ನವೀಸ್ ಅವರು ಬಂಡೇಕರ್ ವಿರುದ್ಧ ಆಡಿಯೋ ಕ್ಲಿಪ್ ಒಂದನ್ನು ತಿರುಚಿದ ಆರೋಪ ಹೊರಿಸಿದ್ದರು. ಆ ಆಡಿಯೋ ಕ್ಲಿಪ್ ನಲ್ಲಿ ಫಡ್ನವೀಸ್ ಅವರು ಪಕ್ಷದ ಕಾರ್ಯಕರ್ತರಿಗೆ `ಸಾಮ್, ಧಾಮ್, ದಂಡ್, ಭೇದ್' ಉಪಯೋಗಿಸಿ ಉಪಚುನಾವಣೆ ಗೆಲ್ಲಲು ಕರೆ ನೀಡಿದ್ದರು.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಂಪರ್ಕ್ ಫಾರ್ ಸಮರ್ಥನ್ ಕಾರ್ಯಕ್ರಮದನ್ವಯ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದ ಹತ್ತು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿಗಿನ ದಿನಗಳಲ್ಲಿ ಬಿಜೆಪಿಯ ವಿರುದ್ಧ ಕಟು ಟೀಕೆಗಳನ್ನು ಮಾಡುತ್ತಿರುವ ಶಿವಸೇನೆ ತಾನು ಮುಂದಿನ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದು ಎಂದು ಈಗಾಗಲೇ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News