ಅಂಗಾಂಶ ಕೃಷಿಯಿಂದ ತಾಯ್ನಾಡಿನಲ್ಲೇ 32 ವಿಧದ ಖರ್ಜೂರ ಬೆಳೆದ ನಿಝಾಮುದ್ದೀನ್
ಚೆನ್ನೈ, ಜೂ.20: ಸಿಹಿಸಿಹಿಯಾದ ಖರ್ಜೂರಗಳು ಕೇವಲ ಗಲ್ಫ್ ರಾಷ್ಟ್ರಗಳಲ್ಲಿ ಮಾತ್ರ ಬೆಳೆಯಲ್ಪಡುತ್ತವೆ ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆಯಾದರೂ ದೇಶದ ಗುಜರಾತ್, ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಖರ್ಜೂರದ ಮರಗಳನ್ನು ಬೆಳೆಸಲಾಗುತ್ತಿದೆ. ತಮಿಳುನಾಡು ಕೂಡ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದು, ಅಲ್ಲಿನ ವಾತಾವರಣ ಕೂಡ ಈ ಖರ್ಜೂರ ಮರಗಳಿಗೆ ಅನುಕೂಲಕರವಾಗಿದೆ. ಖರ್ಜೂರ ಬೆಳೆಗಾರರಲ್ಲಿ ಒಬ್ಬರು ಅಪರೂಪದ ಬೆಳೆಗಾರರಿದ್ದಾರೆ. ಅಂಗಾಂಶ ಕೃಷಿಯ ಮೂಲಕ ಅವರು ಖರ್ಜೂರ ಬೆಳೆಯುವಲ್ಲಿ ಕ್ರಾಂತಿಯನ್ನೇ ಸಾಧಿಸಿದ್ದಾರೆನ್ನಬಹುದು.
ಅವರೇ ಧರ್ಮಪುರಿ ಜಿಲ್ಲೆಯ ಅರಿಯಕುಲಂ ಎಂಬಲ್ಲಿನ ನಿಝಾಮುದ್ದೀನ್ ಎಸ್. ತಮ್ಮ ತೋಟ ಹಾಗೂ ನರ್ಸರಿಯಲ್ಲಿ ಅವರು ಒಟ್ಟು 32 ವಿಧದ ಖರ್ಜೂರ ಮರಗಳನ್ನು ಬೆಳೆಸಿದ್ದಾರೆ. ಅವರ ತೋಟವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಸಲಿಯಹ್ ಡೇಟ್ಸ್ ಮಾಲಕರಾಗಿರುವ ನಿಝಾಮುದ್ದೀನ್ ಅವರು ತಮ್ಮ ತವರು ರಾಜ್ಯದಲ್ಲಿ ಈ ಬೆಳೆಯನ್ನು ಬೆಳೆಸುವ ಮನಸ್ಸು ಮಾಡಿದ್ದು ಅವರು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾಗ.
"ಸೌದಿ ಅರೇಬಿಯಾದಲ್ಲಿ ಬೆಳೆಯುವಂತಹುದೇ ಖರ್ಜೂರಗಳನ್ನು ಭಾರತದಲ್ಲಿ ಏಕೆ ಬೆಳೆಸಬಾರದೆಂದು ಯೋಚಿಸಿ ಅಲ್ಲಿಂದ ಬರುವಾಗ ನೂರು ಗಿಡಗಳನ್ನು ತಂದು ನೆಟ್ಟಿದ್ದೆ. ಅವುಗಳು ಫಲ ನೀಡಿದೆ" ಎಂದು ಹೇಳುವ ಅವರಿಗೆ ಹಿಂದಿರುಗಿ ನೋಡುವ ಪರಿಸ್ಥಿತಿಯೇ ಎದುರಾಗಿಲ್ಲ. ಅವರ ತೋಟದಲ್ಲೀಗ 32ಕ್ಕೂ ಅಧಿಕ ಜಾತಿಯ ಖರ್ಜೂರಗಳ ಮರಗಳಿವೆ. ಬರ್ಹೀ ಖರ್ಜೂರಕ್ಕೆ ಕೆಜಿಗೆ ರೂ 300 ಬೆಲೆಯಿದೆ. ಪ್ರತಿ ಗಿಡದಿಂದ ಸುಮಾರು 200 ಕೆಜಿ ಬರ್ಹೀ ಖರ್ಜೂರ ದೊರೆಯುತ್ತದೆ ಎಂದು ನಿಝಾಮುದ್ದೀನ್ ಹೇಳುತ್ತಾರೆ.
ವರ್ಷಗಳು ಕಳೆದಂತೆ ಅವರು ಅಂಗಾಂಶ ಕೃಷಿಯ ಲಾಭ ಅರಿತು ಅಂಗಾಂಶ ಗಿಡಗಳನ್ನು ವಿದೇಶದಿಂದ ಇಲ್ಲಿಗೆ ತಂದು ಅವುಗಳನ್ನು ನೆಟ್ಟಿದ್ದರು. ಕೇವಲ ಎರಡೂವರೆ ವರ್ಷಗಳಲ್ಲಿಯೇ ಅವುಗಳು ಫಲ ನೀಡಲು ಆರಂಭಿಸಿದ್ದವು. ಅಂಗಾಂಶ ಕೃಷಿಯ ಮೂಲಕ ಬೆಳೆಯಲಾದ ಗಿಡಗಳನ್ನು ಅಬುಧಾಬಿಯಿಂದ ತರಿಸಿ ಅವುಗಳನ್ನು ಭಾರತದಾದ್ಯಂತ ಮಾರಾಟ ಮಾಡಲಾಗುತ್ತದೆ ಎಂದೂ ಅವರು ವಿವರಿಸುತ್ತಾರೆ. ಖರ್ಜೂರದಿಂದ ಸಿರಪ್, ಚಾಕೊಲೇಟ್ ಮುಂತಾದ ಉಪ ಉತ್ಪನ್ನಗಳನ್ನು ತಯಾರಿಸುವ ಯೋಚನೆಯೂ ನಿಝಾಮುದ್ದೀನ್ ಅವರಿಗಿದೆ.
ಕೃಪೆ: english.alarabiya.net