ಜೂನ್ 25ರಂದು ವೊಹ್ರಾ ಅಧಿಕಾರಾವಧಿ ಅಂತ್ಯ: ಅಮರನಾಥ ಯಾತ್ರೆವರೆಗೆ ಮುಂದುವರಿಯುವ ಸಾಧ್ಯತೆ

Update: 2018-06-20 15:01 GMT

ಶ್ರೀನಗರ, ಜೂ. 20: ಮೆಹಬೂಬ ಮುಫ್ತಿ ನೇತೃತ್ವದ ಮೈತ್ರಿ ಸರಕಾರ ಪಥನಗೊಂಡ ಬಳಿಕ ಜಮ್ಮು ಹಾಗೂ ಕಾಶ್ಮೀರದ ಜೂನ್ 25ರಂದು ನಿವೃತ್ತರಾಗಲಿರುವ ರಾಜ್ಯಪಾಲ ಎನ್.ಎನ್. ವೊಹ್ರಾ ಅವರ ಆಡಳಿತಕ್ಕೆ ಮತ್ತೆ ಒಳಗಾಗಿದೆ. ವೊಹ್ರಾ ಅವರ ಅಧಿಕಾರವಧಿ ಅಂತ್ಯಗೊಂಡ ಬಳಿಕ ನೂತನ ರಾಜ್ಯಪಾಲರನ್ನು ನಿಯೋಜಿಸಲು ಸರಕಾರ ಚಿಂತಿಸುತ್ತಿದೆಯೇ ಎಂಬ ಪ್ರಶ್ನೆಗೆ ಬಿಜೆಪಿ ನಾಯಕ ಹಾಗೂ ಪತನಗೊಂಡ ಜಮ್ಮು ಹಾಗೂ ಕಾಶ್ಮೀರ ಸರಕಾರದ ಉಪ ಮುಖ್ಯಮಂತ್ರಿಯಾಗಿದ್ದ ಕವಿಂದರ್ ಗುಪ್ತಾ, ‘‘ಇದು ದೈನಂದಿನ ವಿಚಾರ. ಅಮರನಾಥ ಯಾತ್ರೆಯ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು’’ಎಂದರು.

ಅವರ ಈ ಹೇಳಿಕೆ ಅಮರನಾಥ ಯಾತ್ರೆ ಮುಗಿಯುವ ಆಗಸ್ಟ್ ವರೆಗೆ ವೊಹ್ರಾ ಅವರು ಅಧಿಕಾರ ತ್ಯಜಿಸಲು ಕೇಂದ್ರ ಬಿಡಲಾರದು ಎಂಬ ಸೂಚನೆ ನೀಡಿದೆ. ವೊಹ್ರಾ ಅವರು ಐಎಎಸ್ ಅಧಿಕಾರಿ. 1997ರಲ್ಲಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ಆಡಳಿತ ಅವಧಿಯಲ್ಲಿ ಕೇಂದ್ರ ಗೃಹ ಕಾಯದರ್ಶಿ ಹಾಗೂ ಪ್ರಾಥಮಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 5 ವರ್ಷಗಳ ಕಾಲ ಕಾಶ್ಮೀರ ವಿಷಯದ ಕುರಿತು ಸಂಧಾನಕಾರರಾಗಿ ವೊಹ್ರಾ ಕಾರ್ಯ ನಿರ್ವಹಿಸಿದ್ದರು. 2008ರಲ್ಲಿ ಅವರನ್ನು ರಾಜ್ಯಪಾಲರನ್ನಾಗಿ ನಿಯೋಜಿಸಲಾಗಿತ್ತು. 100 ಎಕರೆ ಅರಣ್ಯ ಭೂಮಿಯನ್ನು ಅಮರನಾಥ ದೇವಾಲಯ ಮಂಡಳಿಗೆ ಹಸ್ತಾಂತರಿಸುವ ನಿರ್ಧಾರದ ಕುರಿತು ನಡೆದ ಸಾಮೂಹಿಕ ಪ್ರತಿಭಟನೆಯನ್ನು ವೊಹ್ರಾ ಸಮರ್ಥವಾಗಿ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News