ರಾಜ್ಯಪಾಲರ ಆಡಳಿತ ಹೇರಿಕೆ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗೆ ಅಡ್ಡಿಯಾಗದು: ಬಿಪಿನ್ ರಾವತ್

Update: 2018-06-20 15:04 GMT

ಹೊಸದಿಲ್ಲಿ, ಜೂ. 20: ಜಮ್ಮು ಹಾಗೂ ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಹೇರಿಕೆ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗೆ ಅಡ್ಡಿಯಾಗದು ಎಂದು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಬುಧವಾರ ಹೇಳಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೊಳಿಸಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅನುಮತಿ ನೀಡಿದ ಬಳಿಕ ಜನರಲ್ ರಾವತ್ ಅವರು ಈ ಹೇಳಿಕೆ ನೀಡಿದ್ದಾರೆ.

‘‘ನಾವು ರಮಝಾನ್ ನಲ್ಲಿ ಮಾತ್ರ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಸ್ಥಗಿತಗೊಳಿಸಿದೆವು. ಆದರೆ, ಏನು ಆಗುತ್ತದೆ ಎಂದು ನಾವು ನೋಡಿದ್ದೇವೆ. ರಾಜ್ಯಪಾಲರ ಆಡಳಿತ ಹೇರಿಕೆ ನಮ್ಮ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರದು. ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ. ಯಾವುದೇ ರಾಜಕೀಯ ಮಧ್ಯಪ್ರವೇಶವನ್ನು ನಾವು ಎದುರಿಸಬೇಕಾಗಿಲ್ಲ’’ ಎಂದು ಅವರು ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅನುಮತಿ ದೊರಕಿದ ಬಳಿಕ ರಾಜ್ಯಪಾಲ ಎನ್.ಎನ್. ವೊಹ್ರಾ ಜಮ್ಮು ಹಾಗೂ ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೊಳಿಸಿದ ಬಗ್ಗೆ ಬುಧವಾರ ಘೋಷಣೆ ಹೊರಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News