2022ರ ವೇಳೆಗೆ ಕೃಷಿ ಆದಾಯ ದುಪ್ಪಟ್ಟುಗೊಳಿಸುವುದು ಸರಕಾರದ ಗುರಿ: ಪ್ರಧಾನಿ ಮೋದಿ
ಹೊಸದಿಲ್ಲಿ, ಜೂ.20: 2022ರಲ್ಲಿ ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸುವ ಉದ್ದೇಶದಿಂದ ಸರಕಾರವು ಕೃಷಿ ಬಜೆಟನ್ನು 2.12 ಲಕ್ಷ ಕೋಟಿಗೆ ಏರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.
ಸುಮಾರು 600 ಜಿಲ್ಲೆಗಳ ರೈತರ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ಕೃಷಿ ಆದಾಯವನ್ನು ಹೆಚ್ಚಿಸಲು ಸರಕಾರ ರೂಪಿಸಿರುವ ನೀತಿಯ ನಾಲ್ಕು ಆಧಾರಸ್ತಂಭಗಳೆಂದರೆ, ವೆಚ್ಚ ಕಡಿತ, ಬೆಳೆಗೆ ನ್ಯಾಯಯುತ ಬೆಲೆ, ಬೆಳೆ ಕೊಳೆಯುವುದನ್ನು ತಪ್ಪಿಸುವುದು ಮತ್ತು ಪರ್ಯಾಯ ಆದಾಯದ ಮೂಲವನ್ನು ಸೃಷ್ಟಿಸುವುದು ಎಂದು ತಿಳಿಸಿದ್ದಾರೆ. ಶ್ರಮಜೀವಿಗಳಾದ ನಮ್ಮ ರೈತರ ಆದಾಯವನ್ನು 2022ರ ವೇಳೆಗೆ ದುಪ್ಪಟ್ಟುಗೊಳಿಸುವ ಕಾರ್ಯದಲ್ಲಿ ನಾವು ಮಗ್ನರಾಗಿದ್ದೇವೆ. ಅದಕ್ಕಾಗಿ ನಾವು ಅಗತ್ಯವಿರುವೆಡೆ ಸರಿಯಾದ ನೆರವನ್ನು ನೀಡುತ್ತಿದ್ದೇವೆ. ಭಾರತದ ಕೃಷಿಕರ ಮೇಲೆ ನಮಗೆ ವಿಶ್ವಾಸವಿದೆ ಎಂದು ಮೋದಿ ತಿಳಿಸಿದ್ದಾರೆ.
ದೇಶದಲ್ಲಿ ಕೇವಲ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಮಾತ್ರ ಏರಿಕೆಯಾಗುತ್ತಿಲ್ಲ. ಜೊತೆಗೆ ಹಾಲು, ಹಣ್ಣುಗಳು ಮತ್ತು ತರಕಾರಿ ಉತ್ಪಾದನೆಯಲ್ಲೂ ಹೆಚ್ಚಳವಾಗಿದೆ ಎಂದು ಮೋದಿ ತಿಳಿಸಿದ್ದಾರೆ. 2010ರಿಂದ 2014ರ ಅವಧಿಯಲ್ಲಿ 250 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದಿಸಲಾಗಿದ್ದರೆ, 2017-18ರಲ್ಲಿ 280 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆ ಮಾಡಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.