ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಖಂಡಿಸಿ ಪ್ರತ್ಯೇಕವಾದಿಗಳಿಂದ ಬಂದ್‌ಗೆ ಕರೆ: ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತ
ಶ್ರೀನಗರ, ಜೂ.21: ಪತ್ರಕರ್ತ ಶುಜಾತ್ ಬುಖಾರಿ ಹತ್ಯೆಯನ್ನು ಖಂಡಿಸಿ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಕಣಿವೆ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿ ಶ್ರೀನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು, ಇಂಧನ ಕೇಂದ್ರಗಳು ಹಾಗೂ ಇತರ ಸಂಸ್ಥೆಗಳು ಮುಚ್ಚಿದ್ದವು ಎಂದು ವರದಿ ತಿಳಿಸಿದೆ. ವಾಹನ ಸಂಚಾರ ಬಹುತೇಕ ಸ್ತಬ್ಧವಾಗಿದ್ದರೂ ಖಾಸಗಿ ವಾಹನಗಳು ಮತ್ತು ಆಟೋ ರಿಕ್ಷಾಗಳು ಕಾರ್ಯಾಚರಿಸುತ್ತಿದ್ದವು. ಇದರಿಂದಾಗಿ ಜನರು ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಪರದಾಡುವಂತಾಯಿತು.
ಜಂಟಿ ಪ್ರತಿರೋಧ ನಾಯಕತ್ವ (ಜೆಆರ್‌ಎಲ್) ಎಂಬ ಹೆಸರಿನಡಿ ಪ್ರತ್ಯೇಕತಾವಾದಿಗಳು ಪತ್ರಕರ್ತ ಶುಜಾತ್ ಬುಖಾರಿ ಹಾಗೂ ಸೇನಾ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ಇತರ ನಾಗರಿಕರ ಹತ್ಯೆಯನ್ನು ಖಂಡಿಸಿ ಗುರುವಾರದಂದು ಬಂದ್‌ಗೆ ಕರೆ ನೀಡಿದ್ದರು.
ಬುಖಾರಿ ಹತ್ಯೆಯನ್ನು ಅಂತರ್‌ರಾಷ್ಟ್ರೀಯ ತನಿಖೆಗೆ ಒಳಪಡಿಸಬೇಕು ಎಂದು ಜೆಆರ್‌ಎಲ್ ಆಗ್ರಹಿಸಿದೆ.
ಜೂನ್ 14ರಂದು ಶುಜಾತ್ ಬುಖಾರಿ ಹಾಗೂ ಅವರ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಅವರ ಪ್ರೆಸ್‌ನ ಹೊರಗಡೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.