29 ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿ ಅಮೆರಿಕಕ್ಕೆ ತಿರುಗೇಟು ನೀಡಿದ ಭಾರತ
ಹೊಸದಿಲ್ಲಿ,ಜೂ.21: ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದಿಂದ ರಫ್ತಾಗುವ ಕೆಲವು ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ತೀವ್ರವಾಗಿ ಹೆಚ್ಚಿಸಿರುವುದಕ್ಕೆ ಪ್ರತಿಯಾಗಿ ಭಾರತವು ಹಲವಾರು ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ. ಈ ಪೈಕಿ ಹೆಚ್ಚಿನ ಉತ್ಪನ್ನಗಳನ್ನು ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದೆ.
ಚೀನಾ,ಐರೋಪ್ಯ ಒಕ್ಕೂಟ ಮತ್ತು ಇತರ ರಾಷ್ಟ್ರಗಳು ಅಮೆರಿಕದ ಕ್ರಮಕ್ಕೆ ಈಗಾಗಲೇ ಪ್ರತಿಕ್ರಮಗಳನ್ನು ತೆಗೆದುಕೊಂಡಿದ್ದು,ಇದೀಗ ಭಾರತವೂ ಅವುಗಳ ಸಾಲಿಗೆ ಸೇರುವ ಮೂಲಕ ಜಾಗತಿಕ ವ್ಯಾಪಾರ ಸಮರವು ಇನ್ನಷ್ಟು ತೀವ್ರಗೊಂಡಿದೆ.
ಕಡಲೆ ಮತು ಕಡಲೆ ಬೇಳೆ ಮೇಲಿನ ಆಮದು ಸುಂಕವನ್ನು ಶೇ.60ಕ್ಕೆ ಮತ್ತು ಮಸೂರ ಮೇಲಿನ ಆಮದು ಸುಂಕವನ್ನು ಶೇ.30ಕ್ಕೆ ಹೆಚ್ಚಿಸಲಾಗಿದೆ. ಫೌಂಡ್ರಿ ಎರಕಗಳಲ್ಲಿ ಬಳಸುವ ಬೋರಿಕ್ ಆ್ಯಸಿಡ್ ಮತ್ತು ಬೈಂಡರ್‌ಗಳ ಮೇಲಿನ ಆಮದು ಸುಂಕವನ್ನು ಶೇ.7.5ಕ್ಕೆ ಮತ್ತು ಗೃಹಬಳಕೆಯ ರೀಜಂಟ್ ಅಥವಾ ಕಾರಕಗಳ ಮೇಲಿನ ಸುಂಕವನ್ನು ಶೇ.10ಕ್ಕೆ ಹೆಚ್ಚಿಸಲಾಗಿದೆ. ಸಿಗಡಿಯ ಜಾತಿಗೆ ಸೇರಿದ ಆರ್ಟೆಮಿಯಾದ ಮೇಲಿನ ಆಮದು ಸುಂಕವನ್ನು ಶೇ.15ಕ್ಕೆ ಏರಿಸಲಾಗಿದೆ.
ಅಕ್ರೋಟ್‌ನಂತಹ ಕೆಲವು ಪೌಷ್ಟಿಕ ಬೀಜಗಳು,ಕಬ್ಬಿಣ ಮತ್ತು ಉಕ್ಕು ಉತ್ಪಾದನೆಗಳು,ಸೇಬು,ಪೇರಳೆ,ಸ್ಟೇನ್‌ಲೆಸ್ ಸ್ಟೀಲ್‌ನ ಫ್ಲಾಟ್ ರೋಲ್ಡ್ ಉತ್ಪನ್ನಗಳು,ಇತರ ಅಲಾಯ್ ಸ್ಟೀಲ್,ಟ್ಯೂಬ್ ಮತ್ತು ಪೈಪ್ ಫಿಟಿಂಗ್‌ಗಳು, ಸ್ಕ್ರೂ,ಬೋಲ್ಟ್ ಮತ್ತು ರಿವಿಟ್ ಇವುಗಳೂ ಆಮದು ಸುಂಕವನ್ನು ಹೆಚ್ಚಿಸಲಾಗಿರುವ ಸರಕುಗಳಲ್ಲಿ ಸೇರಿವೆ. ಆದರೆ ಅಮೆರಿಕದಿಂದ ಆಮದಾಗುವ ಬೈಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲಾಗಿಲ್ಲ. ಕಳೆದ ವಾರ ಜಾಗತಿಕ ವ್ಯಾಪಾರ ಸಂಘಟನೆ(ಡಬ್ಲುಟಿಒ)ಗೆ 30 ಸರಕುಗಳ ಪರಿಷ್ಕೃತ ಪಟ್ಟಿಯನ್ನು ಸಲ್ಲಿಸಿದ್ದ ಭಾರತವು ತಾನು ಅವುಗಳ ಮೇಲಿನ ಆಮದು ಸುಂಕವನ್ನು ಶೇ.50ರವರೆಗೆ ಹೆಚ್ಚಿಸಲು ಉದ್ದೇಶಿಸಿದ್ದೇನೆ ಎಂದು ತಿಳಿಸಿತ್ತು. ಕೆಲವು ಉಕ್ಕು ಮತ್ತು ಅಲುಮಿನಿಯಂ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಅಮೆರಿಕವು ಹೆಚ್ಚಿಸಿರುವುದಕ್ಕೆ ತಿರುಗೇಟಾಗಿ ಭಾರತವು ಈ ಕ್ರಮವನ್ನು ಕೈಗೊಂಡಿದೆ. 800 ಸಿಸಿಗಿಂತ ಹೆಚ್ಚಿನ ಬೈಕ್‌ಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು,ಇತರ 29 ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಅದು ಹೆಚ್ಚಿಸಿದೆ.
ಮಾ.9ರಂದು ಟ್ರಂಪ್ ಅವರು ಆಮದು ಉಕ್ಕು ಮತ್ತು ಅಲ್ಯುಮಿನಿಯಂ ಸಾಮಗ್ರಿಗಳ ಮೇಲೆ ಭಾರೀ ಸುಂಕವನ್ನು ಹೇರಿದ್ದು,ಇದು ಜಾಗತಿಕ ವ್ಯಾಪಾರ ಸಮರದ ಭೀತಿಯನ್ನು ಹುಟ್ಟುಹಾಕಿತ್ತು.
ಉಕ್ಕು ಮತ್ತು ಅಲ್ಯುಮಿನಿಯಂ ಸಾಮಗ್ರಿಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿರುವುದಕ್ಕಾಗಿ ಭಾರತವು ಅಮೆರಿಕದ ವಿರುದ್ಧ ಡಬ್ಲುಟಿಒದ ವಿವಾದ ಇತ್ಯರ್ಥ ಸಮಿತಿಗೆ ದೂರನ್ನೂ ಸಲ್ಲಿಸಿದೆ.