ಉದ್ಯೋಗಕ್ಕಾಗಿ ಲಂಚ ಹಗರಣ: 13 ಅಧಿಕಾರಿಗಳು ಸೇವೆಯಿಂದ ವಜಾ
Update: 2018-06-21 21:14 IST
ಗುವಾಹಟಿ,ಜೂ.21: ಅಸ್ಸಾಂ ಲೋಕಸೇವಾ ಆಯೋಗ(ಎಪಿಎಸ್‌ಸಿ)ದ ಉದ್ಯೋಗಕ್ಕಾಗಿ ಲಂಚ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಕಳೆದ ವರ್ಷದ ನವಂಬರ್‌ನಲ್ಲಿ ಬಂಧಿಸಲ್ಪಟ್ಟು ಗುವಾಹಟಿ ಸೆಂಟ್ರಲ್ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ರಾಜ್ಯ ನಾಗರಿಕ ಸೇವೆಗೆ ಸೇರಿದ 13 ಅಧಿಕಾರಿಗಳನ್ನು ಅಸ್ಸಾಂ ಸರಕಾರವು ಸೇವೆಯಿಂದ ವಜಾಗೊಳಿಸಿದೆ.
ಬಂಧನದ ಸಂದರ್ಭದಲ್ಲಿ ಈ ಅಧಿಕಾರಿಗಳು ಪ್ರೊಬೇಷನ್ ಅವಧಿಯಲ್ಲಿದ್ದರು.
ಈ ಎಲ್ಲ ಅಧಿಕಾರಿಗಳು ಎಪಿಎಸ್‌ಸಿಯ ಮಾಜಿ ಅಧ್ಯಕ್ಷ ರಾಕೇಶ ಪಾಲ್ ಅವರಿಗೆ ಲಂಚ ನೀಡಿದ್ದರು ಮತ್ತು ರಾಜ್ಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳಲು ಅಕ್ರಮ ಮಾರ್ಗಗಳನ್ನು ಬಳಸಿದ್ದರು ಎಂದು ಆರೋಪಿಸಲಾಗಿದೆ.
ಬಂಧಿತ ಆರೋಪಿಗಳಲ್ಲಿ ಮಾಜಿ ಕಾಂಗ್ರೆಸ್ ಸಚಿವ ನೀಲಮಣಿ ಸೇನ್ ಡೇಕಾ ಅವರ ಪುತ್ರ ರಾಜರ್ಷಿ ಸೇನ್ ಡೇಕಾ ಸೇರಿದ್ದಾನೆ.
ಹಗರಣಕ್ಕೆ ಸಂಬಂಧಿಸಿದಂತೆ ಪಾಲ್ ಜೊತೆಗೆ ಅಸ್ಸಾಂ ನಾಗರಿಕ ಸೇವೆಗಳು ಮತ್ತು ಅಸ್ಸಾಂ ಪೊಲೀಸ್ ಸೇವೆಗಳಿಗೆ ಸೇರಿದ 35 ಅಧಿಕಾರಿಗಳನ್ನು ಈವರೆಗೆ ಬಂಧಿಸಲಾಗಿದೆ.