ಫ್ರಾನ್ಸ್‌ನಲ್ಲಿ 25 ಲಕ್ಷಕ್ಕೂ ಅಧಿಕ ಯೋಗಪ್ರೇಮಿಗಳಿದ್ದಾರೆ: ರಾಯಭಾರಿ
Update: 2018-06-21 21:22 IST
ಹೊಸದಿಲ್ಲಿ,ಜು.21: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಗುರುವಾರ ಇಲ್ಲಿಯ ಫ್ರಾನ್ಸ್ ರಾಯಭಾರಿ ಕಚೇರಿಯ 70ಕ್ಕೂ ಅಧಿಕ ಸಿಬ್ಬಂದಿ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಕಚೇರಿಯ ವಿಶಾಲವಾದ ಮುಖ್ಯ ಸಭಾಂಗಣದಲ್ಲಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.
ಫ್ರಾನ್ಸ್‌ನಲ್ಲಿ 25 ಲಕ್ಷಕ್ಕೂ ಅಧಿಕ ಯೋಗಾಸಕ್ತರಿದ್ದು,ಇದರಿಂದಾಗಿ ನಮ್ಮ ದೇಶವು ಐರೋಪ್ಯ ಯೋಗಕೇಂದ್ರವಾಗಿದೆ ಎಂದು ಭಾರತದಲ್ಲಿ ಫ್ರಾನ್ಸ್ ರಾಯಭಾರಿ ಯಾಗಿರುವ ಅಲೆಕ್ಸಾಂಡರ್ ಝೀಗ್ಲರ್ ಅವರು ಹೇಳಿಕೆಯಲ್ಲಿ ತಿಳಿಸಿದರು.
ತನ್ನ ಸಿಬ್ಬಂದಿಗಳಿಗೆ ಉತ್ತಮ ಕೆಲಸದ ವಾತಾವರಣವನ್ನು ಒದಗಿಸಲು ಬದ್ಧವಾಗಿರುವ ಫ್ರಾನ್ಸ್ ರಾಯಭಾರಿ ಕಚೇರಿಯು ಕಳೆದ ಆರು ತಿಂಗಳುಗಳಿಂದಲೂ ಸಿಬ್ಬಂದಿಗಳಿಗೆ ಊಟದ ವಿರಾಮದ ವೇಳೆ ಯೋಗ ತರಗತಿಗಳನ್ನು ನಡೆಸುತ್ತಿದೆ ಎಂದ ಅವರು,ಕಳೆದ ವಾರ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಪ್ಯಾರಿಸ್‌ನ ಪ್ರಖ್ಯಾತ ಐಫೆಲ್ ಟವರ್‌ನೆದುರು 10,000 ಯೋಗಾಸಕ್ತರು ಸಮಾವೇಶಗೊಂಡಿದ್ದರು ಎಂದರು.