ಪೊಲೀಸರಿಗೆ ಉಚಿತ ತರಕಾರಿ ನೀಡಲು ನಿರಾಕರಿಸಿದ ಬಾಲಕನಿಗೆ ಜೈಲು ಶಿಕ್ಷೆ!

Update: 2018-06-21 16:20 GMT
ಸಾಂದರ್ಭಿಕ ಚಿತ್ರ

ಪಟ್ನಾ, ಜೂ.21: ಸ್ಥಳೀಯ ಪೊಲೀಸರಿಗೆ ಉಚಿತ ತರಕಾರಿ ನೀಡಲಿಲ್ಲ ಎಂಬ ಕಾರಣಕ್ಕೆ 14ರ ಹರೆಯದ ತರಕಾರಿ ಮಾರುವ ಬಾಲಕನನ್ನು ಮೂರು ತಿಂಗಳ ಕಾಲ ಜೈಲಿಗಟ್ಟಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

“ನನ್ನ ಮಗ ಅಪ್ರಾಪ್ತನಾಗಿದ್ದಾನೆ. ಆತನನ್ನು ಅಕ್ರಮವಾಗಿ ಪೊಲೀಸರು ಜೈಲಿನಲ್ಲಿ ಕೂಡಿ ಹಾಕಿದ್ದಾರೆ” ಎಂದು ಬಾಲಕನ ತಂದೆ ಆರೋಪಿಸಿದ್ದಾರೆ. ಬಾಲಕನ ಆಧಾರ್ ಕಾರ್ಡ್‌ನ ಪ್ರಕಾರ ಆತನ ವಯಸ್ಸು 14 ವರ್ಷವಾದರೆ ಪೊಲೀಸರು ಮಾತ್ರ ಆತನಿಗೆ 18 ವರ್ಷ ತುಂಬಿದೆ ಮತ್ತು ಆತನನ್ನು ಬೈಕ್ ಕಳ್ಳರ ಗುಂಪಿನ ಜೊತೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮ ವರದಿಗಳ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಗೆ ಮುಜುಗರ ತಂದಿರುವ ಈ ಪ್ರಕರಣದ ವರದಿಯನ್ನು 48 ಗಂಟೆಗಳ ಒಳಗಾಗಿ ನಿಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದ್ದರೂ ಪೊಲೀಸರು ಮದ್ಯದ ಮಾಫಿಯಾ ಜೊತೆ ಕೈಜೋಡಿಸಿದ್ದಾರೆ ಎಂಬ ಆರೋಪ ಪದೇಪದೆ ಕೇಳಿಬರುತ್ತಿದೆ. ನಾಲ್ಕು ವರ್ಷಗಳ ಹಿಂದೆ ರಾಜ್ಯದ ಪೊಲೀಸ್ ಇಲಾಖೆಯನ್ನು ಸ್ವಚ್ಛಗೊಳಿಸುವ ಕ್ರಮವಾಗಿ ಸಿಎಂ ನಿತೀಶ್ ಕುಮಾರ್ 250 ಅಧಿಕಾರಿಗಳನ್ನು ವಜಾಗೊಳಿಸಿದ್ದರು. ಕಳೆದ ಮಾರ್ಚ್ 20ರಂದು “ನನ್ನ ಮನೆಯಿಂದಲೇ ನನ್ನ ಮಗನನ್ನು ಪೊಲೀಸರು ಎಳೆದುಕೊಂಡು ಹೋಗಿದ್ದಾರೆ” ಎಂದು ಬಾಲಕನ ತಂದೆ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮಗನನ್ನು ಜೈಲಿನಲ್ಲಿ ಭೇಟಿಯಾದ ಸಂದರ್ಭದಲ್ಲಿ ಆತ, “ನಾನು ಪೊಲೀಸರಿಗೆ ಉಚಿತ ತರಕಾರಿಯನ್ನು ನೀಡಲು ನಿರಾಕರಿಸಿದ ಕಾರಣಕ್ಕೆ ನನ್ನನ್ನು ಬಂಧಿಸಿದ್ದಾರೆ. ಪೊಲೀಸರು ನನ್ನನ್ನು ಥಳಿಸಿದ್ದು ಖಾಲಿ ಹಾಳೆಯ ಮೇಲೆ ಸಹಿ ಹಾಕುವಂತೆ ಒತ್ತಡ ಹೇರಿದ್ದಾರೆ ಎಂದು ನನ್ನ ಮಗ ತಿಳಿಸಿದ್ದಾನೆ” ಎಂದು ಬಾಲಕನ ತಂದೆ ತಿಳಿಸಿದ್ದಾರೆ.

“ಸ್ಥಳೀಯ ಪೊಲೀಸರ ಆಗ್ರಹದಂತೆ ನಾನು ಯಾವಾಗಲೂ ಅವರಿಗೆ ಉಚಿತವಾಗಿ ತರಕಾರಿಯನ್ನು ನೀಡುತ್ತಿದ್ದೆ. ಆದರೆ ಆ ದಿನ ನನ್ನ ಮಗ ಮಾತ್ರ ಗಾಡಿಯಲ್ಲಿದ್ದು ಪೊಲೀಸರು ತರಕಾರಿ ಕೇಳಿದಾಗ ನೀಡಲು ನಿರಾಕರಿಸಿದ್ದ” ಎಂದು ಬಾಲಕನ ತಂದೆ ತಿಳಿಸಿದ್ದಾರೆ.

ನನ್ನ ಜೊತೆ ಇತರ ಇಬ್ಬರನ್ನು ಬಂಧಿಸಲಾಗಿದ್ದು ಅವರು ಯಾರೆಂದೇ ನನಗೆ ತಿಳಿದಿಲ್ಲ ಎಂದು ಬಾಲಕ ತಿಳಿಸಿರುವುದಾಗಿ ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News