ಕಾಶ್ಮೀರ: ವಿಧಾನಸಭೆ ವಿಸರ್ಜನೆಗೆ ಆಗ್ರಹಿಸಿ ಧರಣಿ

Update: 2018-06-21 16:22 GMT

ಜಮ್ಮು, ಜೂ.21: ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ತಕ್ಷಣ ವಿಸರ್ಜಿಸಬೇಕೆಂದು ಆಗ್ರಹಿಸಿ ಜಮ್ಮು-ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ (ಜೆಕೆಎನ್‌ಪಿಪಿ)ಯ ಕಾರ್ಯಕರ್ತರು ಗುರುವಾರ ಧರಣಿ ನಡೆಸಿದರು. ಪಿಡಿಪಿ ಜೊತೆಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡ ಬಳಿಕ ರಾಜ್ಯದಲ್ಲಿ ವಿಧಾನಸಭೆಯನ್ನು ಅಮಾನತಿನಲ್ಲಿಡಲಾಗಿದೆ.

ಈಗ ರಾಜ್ಯದಲ್ಲಿ ಹೊಸ ಸರಕಾರ ರಚಿಸಲು ಶಾಸಕರಿಗೆ ಆಮಿಷವೊಡ್ಡುವ ‘ಕುದುರೆ ವ್ಯಾಪಾರ’ ನಡೆಯುವ ಸಾಧ್ಯತೆಯಿದೆ. ಅಲ್ಲದೆ ಯಾವುದೇ ಪಕ್ಷ ಸರಕಾರ ರಚಿಸಲು ಸಾಧ್ಯವಾಗದ ಸ್ಥಿತಿ ಇದ್ದರೆ ಆಗ ವಿಧಾನಸಭೆಯನ್ನು ವಿಸರ್ಜಿಸಬೇಕೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಜೆಕೆಎನ್‌ಪಿಪಿ ಅಧ್ಯಕ್ಷ ಹರ್ಷ್‌ದೇವ್ ಸಿಂಗ್ ತಿಳಿಸಿದರು. ಜಮ್ಮುವಿನ ಪ್ರದರ್ಶನಾ ಮೈದಾನದಲ್ಲಿ ಜೆಕೆಎನ್‌ಪಿಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅವರು, ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಯುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ತಿಳಿಸಿದರು.

ಕಾಶ್ಮೀರದಲ್ಲಿ ಬೇರೆ ಯಾವುದೇ ಪಕ್ಷಗಳು ಸರಕಾರ ರಚಿಸುವುದರಲ್ಲಿ ಆಸಕ್ತಿ ಹೊಂದಿಲ್ಲ. ಆದರೆ ಬಿಜೆಪಿ ಮುಖಂಡ ಕವಿಂದರ್ ಗುಪ್ತಾ ಮಾತ್ರ ತಮ್ಮ ಪಕ್ಷ ಹೊಸ ನಡೆಯೊಂದನ್ನು ಇರಿಸಲಿದೆ ಎನ್ನುವ ಮೂಲಕ ತೆರೆಮರೆಯಲ್ಲಿ ನಡೆಯಲಿರುವ ಕಾರ್ಯದ ಮುನ್ಸೂಚನೆ ನೀಡಿದ್ದಾರೆ. ಜೆಕೆಎನ್‌ಪಿಪಿ ಹಾಗೂ ರಾಜ್ಯದ ಜನತೆ ಯಾವುದೇ ರೀತಿಯ ಕುದುರೆವ್ಯಾಪಾರ ನಡೆಸಿ ಅಕ್ರಮ ಮಾರ್ಗದ ಮೂಲಕ ಅಧಿಕಾರ ಪಡೆಯುವ ಪ್ರಯತ್ನವನ್ನು ಸಹಿಸುವುದಿಲ್ಲ. ರಾಜ್ಯಪಾಲ ಎನ್.ಎನ್.ವೋರಾರನ್ನು ಭೇಟಿಯಾಗಿ ತಕ್ಷಣ ವಿಧಾನಸಭೆ ವಿಸರ್ಜಿಸುವಂತೆ ಕೋರಲಿದ್ದೇವೆ ಎಂದು ಹರ್ಷದೇವ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News