“ಮುಂದಿನ ಮುಖ್ಯ ಆರ್ಥಿಕ ಸಲಹೆಗಾರರು ಹೀಗಿರಬೇಕು”
ಹೊಸದಿಲ್ಲಿ, ಜೂ.21: ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಸ್ಥಾನಕ್ಕೆ ರಾಜೀನಾಮೆ ನೀಡಿದ ಅರವಿಂದ್ ಸುಬ್ರಮಣಿಯನ್ ಅವರಿಗೆ ಭಾರತೀಯ ತತ್ವ, ಮೌಲ್ಯಗಳ ಕುರಿತ ತಿಳುವಳಿಕೆಯ ಕೊರತೆಯಿತ್ತು ಮತ್ತು ಅವರು ರೈತರನ್ನು ಕಡೆಗಣಿಸಿದ್ದರು. ಆದ್ದರಿಂದ ಮುಂದೆ ನೇಮಕವಾಗಲಿರುವ ಸಿಇಎಗೆ ಭಾರತೀಯ ತತ್ವ, ಮೌಲ್ಯಗಳ ಕುರಿತು ನಂಬಿಕೆ ಇರಬೇಕು ಮತ್ತು ಎಫ್‌ಡಿಐ ಬಗ್ಗೆ ಭ್ರಾಂತಿ ಹೊಂದಿರಬಾರದು ಎಂದು ಆರೆಸ್ಸೆಸ್ ಸಹಸಂಸ್ಥೆ ಸ್ವದೇಶಿ ಜಾಗರಣ್ ಮಂಚ್(ಎಸ್‌ಜೆಎಂ) ಹೇಳಿದೆ.
ಸುಬ್ರಮಣಿಯನ್ ಅವರಿಗೆ ದೇಶದ ಕುರಿತ ತಿಳುವಳಿಕೆಯ ಕೊರತೆಯಿತ್ತು. ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ಯ ಗೀಳು ಹೊಂದಿದ್ದ ಅವರು ನಮ್ಮ ಅರ್ಥವ್ಯವಸ್ಥೆಯ ಪ್ರಮುಖ ಅಂಶಗಳಾದ ಕೃಷಿ ಮತ್ತು ರೈತರನ್ನು ಕಡೆಗಣಿಸಿದ್ದರು ಎಂದು ಎಸ್‌ಜೆಎಂ ಸಹ ಸಂಯೋಜಕ ಅಶ್ವನಿ ಮಹಾಜನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ನೀತಿ ಆಯೋಗದ ಮಾಜಿ ಸಿಇಒ ಅರವಿಂದ್ ಪಣಗರಿಯಾರಂತೆ ಸುಬ್ರಮಣಿಯನ್ ಕೂಡಾ ‘ವಾಷಿಂಗ್ಟನ್ ಸಹಮತ’ದ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅವರ ಕಾರ್ಯನೀತಿ ಅಥವಾ ಉದ್ದೇಶ ಏನೆಂದು ಸ್ಪಷ್ಟವಾಗಿಲ್ಲ ಎಂದು ಮಹಾಜನ್ ದೂರಿದರು.
ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ವಾಷಿಂಗ್ಟನ್ ಮೂಲದ ಸಂಸ್ಥೆಗಳಾಗಿರುವ ಐಎಂಎಫ್, ವಿಶ್ವಬ್ಯಾಂಕ್ ಮತ್ತು ಅಮೆರಿಕದ ಖಜಾನೆ ಇಲಾಖೆ ರೂಪಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್‌ಗೆ ‘ವಾಷಿಂಗ್ಟನ್ ಸಹಮತ’ ಎಂದು ಕರೆಯಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವಿಟರ್ ಸಂದೇಶ ಕಳುಹಿಸಿರುವ ಮಹಾಜನ್, ಮುಂದಿನ ಸಿಇಎ ವಿಶ್ರಾಂತಿ ಪಡೆಯುವವರು ಆಗಿರಬಾರದು. ದೇಶದ ಕೃಷಿಕರ , ಕಾರ್ಮಿಕರ ಹಾಗೂ ಉದ್ಯಮಿಗಳ ಬಗ್ಗೆ ವಿಶ್ವಾಸ ಇರುವಂತಹ ವ್ಯಕ್ತಿ ಈ ಹುದ್ದೆಗೆ ನೇಮಕವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಆರ್ಥಿಕ ಸಚಿವಾಲಯದ ಸಲಹೆಗಾರರಾಗಿ 2014ರ ಅಕ್ಟೋಬರ್ 16ರಂದು ನೇಮಕವಾಗಿದ್ದ ಅರವಿಂದ್ ಸುಬ್ರಮಣಿಯನ್ ಹುದ್ದೆ ತ್ಯಜಿಸಲಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ತಿಳಿಸಿದ್ದರು.