ಇತಿಹಾಸ ಬಿಜೆಪಿಯ ದುರಾಸೆಯನ್ನು ಎಂದೂ ಕ್ಷಮಿಸದು: ಶಿವಸೇನೆ
ಮುಂಬೈ, ಜೂ. 21: ಅರಾಜಕತೆ ಹರಡಿದ ಬಳಿಕ ಬಿಜೆಪಿ ಜಮ್ಮು ಹಾಗೂ ಕಾಶ್ಮೀರ ಮೈತ್ರಿ ಸರಕಾರದಿಂದ ಹೊರ ಬಂದಿತು ಎಂದು ಗುರುವಾರ ಆರೋಪಿಸಿರುವ ಶಿವಸೇನೆ, ಬಿಜೆಪಿ ದುರಾಸೆಯನ್ನು ಇತಿಹಾಸ ಎಂದಿಗೂ ಕ್ಷಮಿಸದು ಎಂದಿದೆ. ಉತ್ತರದ ರಾಜ್ಯಗಳಲ್ಲಿ ಭಯೋತ್ಪಾದನೆ ಹಾಗೂ ಹಿಂಸಾಚಾರ ತಡೆಯಲು ಬಿಜೆಪಿ ವಿಫಲವಾಗಿದೆ. ಆದರೆ, ಇದಕ್ಕೆ ಪಿಡಿಪಿಯನ್ನು ಹೊಣೆ ಮಾಡುತ್ತಿದೆ ಎಂದು ಹೇಳಿರುವ ಶಿವಸೇನೆ, ಬಿಜೆಪಿಯ ಈ ನಡೆ ಬ್ರಿಟೀಶರು ಭಾರತ ತ್ಯಜಿಸಿದ ರೀತಿಗೆ ಹೋಲಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ರಾಷ್ಟ್ರದ ಆಡಳಿತ ನಡೆಸುವುದು ಮಕ್ಕಳಾಟವಲ್ಲ ಎಂದು ಹೇಳಿದೆ. ‘‘ಅಲ್ಲಿ ಪರಿಸ್ಥಿತಿ ಈ ರೀತಿ ಎಂದೂ ಹದಗೆಟ್ಟಿಲ್ಲ. ಇಷ್ಟು ವ್ಯಾಪಕವಾಗಿ ರಕ್ತದ ಹೊಳೆ ಎಂದೂ ಹರಿದಿಲ್ಲ. ಈ ಹಿಂದೆ ಇಷ್ಟೊಂದು ಯೋಧರು ತಮ್ಮ ಜೀವ ಕಳೆದುಕೊಂಡಿಲ್ಲ’’ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ. ‘‘ಬಿಜೆಪಿಯ ದುರಾಸೆ ಕಾರಣಕ್ಕೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಮೈತ್ರಿ ಸರಕಾರ ರೂಪುಗೊಂಡಿತ್ತು. ಈ ದುರಾಸೆಗೆ ದೇಶ, ಯೋಧರು ಹಾಗೂ ಕಾಶ್ಮೀರದ ಜನರು ಬೆಲೆ ತೆರಬೇಕಾಯಿತು’’ ಎಂದು ಸಾಮ್ನಾ ಹೇಳಿದೆ.
‘‘ನಗದು ನಿಷೇಧದ ಬಳಿಕ ಭಯೋತ್ಪಾದನೆ ಸಾವಿರ ಪಟ್ಟು ಹೆಚ್ಚಾಗಿದೆ. ಪಾಕಿಸ್ಥಾನಿಯರ ಗಡಿ ನುಸುಳುವಿಕೆಯಲ್ಲಿ ಏರಿಕೆಯಾಗಿದೆ. ಯುದ್ಧ ನಡೆಯದೇ ಇದ್ದರೂ ಯೋಧರ ಸಾವಿನ ಸಂಖ್ಯೆಹೆಚ್ಚಾಗಿದೆ. ಇದೆಲ್ಲವನ್ನೂ ನಿಯಂತ್ರಿಸಲು ನೀವು ವಿಫಲರಾದಿರಿ. ಆದರೆ, ಇದಕ್ಕೆ ಪಿಡಿಪಿಯನ್ನು ಹೊಣೆಯಾಗಿಸಿದಿರಿ. ಇದು ಬ್ರಿಟೀಶರು ಭಾರತ ತ್ಯಜಿಸಿದ ರೀತಿಯಂತೆ ಇದೆ’’
ಸಾಮ್ನಾ, ಶಿವಸೇನೆ ಮುಖವಾಣಿ